ಸದ್ಯದಲ್ಲೇ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಪ್ರತಿಮೆ ಅನಾವರಣ
ಬೆಂಗಳೂರು, ಜು. 1: ನಾಡಪ್ರಭು ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಅವರ ಪ್ರತಿಮೆಯನ್ನು ಬಿಬಿಎಂಪಿ ಕೇಂದ್ರ ಆಡಳಿತ ಕಚೇರಿಯ ಮುಂಭಾಗದಲ್ಲಿರುವ ಫೌಂಟನ್ ಬಳಿ ಆ.15 ರಂದು ಅನಾವರಣಗೊಳಿಸಲಾಗುವುದು ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ಶನಿವಾರ ಲಕ್ಷ್ಮೀದೇವಿ ಅವರ ಪ್ರತಿಮೆ ಅನಾವರಣಕ್ಕೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ಅಡಿ ಪೀಠ, ಹತ್ತು ಅಡಿ ಪ್ರತಿಮೆ ಎತ್ತರ ಸೇರಿದಂತೆ ಒಟ್ಟು 16 ಅಡಿಯ ಲಕ್ಷ್ಮೀದೇವಿ ಅವರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.
ಕಳೆದ ಆರು ತಿಂಗಳಿಂದ ಪ್ರತಿಮೆ ನಿರ್ಮಾಣ ಕಾರ್ಯ ನಡೆದಿದೆ. ಮುಂದಿನ ಮೊದಲ ವಾರದೊಳಗೆ ಪೂರ್ಣಗೊಳ್ಳಲಿದೆ. ಆ.15ರಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಕಾವೇರಿಪುರ ವಾರ್ಡ್‌ನಲ್ಲಿರುವ ಮುನೇಶ್ವರ ಬ್ಲಾಕ್ ಮೊದಲನೇ ಕ್ರಾಸ್‌ನಲ್ಲಿರುವ ಬೃಹತ್ ನೀರುಗಾಲುವೆಯನ್ನು ಪರಿಶೀಲಿಸಿದ ಅವರು, ಶಿಥಲಗೊಂಡಿರುವ ಒಂದೂವರೆ ಕಿ.ಮೀ ಕಾಲುವೆಯನ್ನು ಕೂಡಲೇ ಕೆಡವಿ ತಡೆಗೋಡೆಯನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.