×
Ad

ಜು.18 ರಂದು ದಿಲ್ಲಿಯಲ್ಲಿ ಪಡಿತರ ವಿತರಕರ ಪ್ರತಿಭಟನೆ

Update: 2017-07-01 17:46 IST

ಬೆಂಗಳೂರು,ಜು.1: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ್ಯಾಯಬೆಲೆ ಅಂಗಡಿ ಮಾಲಕರು, ಸೀಮೆಎಣ್ಣೆ ವಿತರಕರು ಜು.18 ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇತ್ತೀಚಿನ ದಿನಗಳಲ್ಲಿ ಮಾರಕವಾದಂತಹ ಆದೇಶ ಜಾರಿ ಮಾಡುತ್ತಿರುವುದನ್ನು ಖಂಡಿಸಿ ಅಂದು ದೇಶದ ಎಲ್ಲ ಪಡಿತರ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ರಾಜ್ಯಾದ್ಯಂತ 1.8 ಕೋಟಿ ಬಿಪಿಎಲ್ ಹಾಗೂ 12 ಲಕ್ಷ ಎಪಿಎಲ್ ಕಾರ್ಡ್‌ಗಳಿಗೆ ಯಶಸ್ವಿಯಾಗಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದೇವೆ. ಆದರೆ, ಸರಕಾರ ಬಯೋಮೆಟ್ರಿಕ್ ಅಳವಡಿಸಲು ಮುಂದಾಗಿದೆ. ಅಲ್ಲದೆ, ಆಧಾರ್ ಕಡ್ಡಾಯ ಮಾಡಿರುವುದರಿಂದ ನೈಜ ಬಡ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆ ಮಾಡುವಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ಸರಕಾರ ಈ ಕುರಿತು ಗಂಭೀರವಾದ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ರಾಜ್ಯ ಹೈಕೋರ್ಟ್ 11 ಜಿಲ್ಲೆಗಳಿಗೆ ಸರಕಾರದ ಆದೇಶದ ವಿರುದ್ಧ ತಡೆಯಾಜ್ಞೆ ನೀಡಲಾಗಿದೆ. ಆದುದರಿಂದ ಸರಕಾರ ಹಿಂದಿನ ಮಾದರಿಯಲ್ಲಿಯೇ ಚೆಕ್‌ಲಿಸ್ಟ್ ಮೂಲಕ ಆಹಾರ ಪದಾರ್ಥಗಳನ್ನು ಸರಳ ರೀತಿಯಲ್ಲಿ ವಿತರಣೆ ಮಾಡಿಕೊಡಲು ಅವಕಾಶ ಕಲ್ಪಿಸಬೇಕು ಹಾಗೂ ಈಗ ಹೊರಡಿಸಿರುವ ಮಾರಕವಾದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಎಲ್ಲ ಜನ ಸಾಮಾನ್ಯರಿಗೂ ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಬೇಕು. ಕೇಂದ್ರದ ನಿರ್ಧಾರದಂತೆ ನೇರ ಹಣಕಾಸು ವರ್ಗಾವಣೆ ನಿಲ್ಲಿಸಬೇಕು. ನ್ಯಾಯಬೆಲೆ ಅಂಗಡಿಗಳ ಮೂಲಕ 5 ಕೆ.ಜಿ. ಎಲ್‌ಪಿಜಿ ಗ್ಯಾಸ್ ವಿತರಣೆ ಮಾಡಬೇಕು. ಎಲ್ಲ ಪಡಿತರ ಚೀಟಿದಾರರಿಗೆ ಸಕ್ಕರೆ ಹಾಗೂ ಸೀಮೆಎಣ್ಣೆ ವಿತರಿಸಬೇಕು. ಆಧಾರ್ ಕಾರ್ಡ್‌ನೊಂದಿಗೆ ಪಡಿತರ ಚೀಟಿ ಜೋಡಣೆ ಕಡ್ಡಾಯಗೊಳಿಸುವುದನ್ನು ಹಿಂಪಡೆಯಬೇಕು.

ಪಡಿತರ ವಿತರಕರ ಕಮಿಷನ್ ಹೆಚ್ಚಿಸಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ ಕಮಿಷನ್ ಕೂಡಲೇ ಬಿಡುಗಡೆ ಮಾಡಬೇಕು. ನ್ಯಾಯಬೆಲೆ ಅಂಗಡಿಗಳ ಮಾಲಕರು ಮರಣಕ್ಕೆ ತುತ್ತಾದರೆ, ಅವರ ವಾರಸುದಾರರಿಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಇರುವ ಕಾನೂನುಗಳನ್ನು ಸರಳೀಕರಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News