‘ರಾಷ್ಟ್ರಪತಿ ಚುನಾವಣೆ’ ಜಾತ್ಯತೀತ ತತ್ವಗಳ ನಡುವಿನ ಹೋರಾಟ: ಮೀರಾಕುಮಾರ್

Update: 2017-07-01 13:45 GMT

ಬೆಂಗಳೂರು, ಜು.1: ದೇಶದ ರಾಷ್ಟ್ರಪತಿ ಚುನಾವಣೆಯು ಇಬ್ಬರು ದಲಿತರ ನಡುವಿನ ಹೋರಾಟವಲ್ಲ. ಬದಲಾಗಿ, ಜಾತ್ಯತೀತ ತತ್ವ ಹಾಗೂ ಅದರ ವಿರುದ್ಧವಿರುವ ಸೈದ್ಧಾಂತಿಕತೆಯ ನಡುವಿನ ಹೋರಾಟ ಎಂದು ಯುಪಿಎ ಬೆಂಬಲಿತ ಪಕ್ಷಗಳ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಡಾ.ಮೀರಾಕುಮಾರ್ ತಿಳಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಶನಿವಾರ ರಾಜ್ಯಕ್ಕೆ ಆಗಮಿಸಿದ ಅವರು, ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಪರವಾಗಿ ಶಾಸಕರು, ಸಂಸದರ ಬಳಿ ಮತಯಾಚಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಈ ಹಿಂದೆ ನಡೆದ ರಾಷ್ಟ್ರಪತಿ ಚುನಾವಣೆಗಳಲ್ಲಿ ಎಂದಿಗೂ ಅಭ್ಯರ್ಥಿಗಳ ಜಾತಿ ಚರ್ಚಾ ವಿಷಯವಾಗಿರಲಿಲ್ಲ. ಅಭ್ಯರ್ಥಿಗಳ ಸಾಮರ್ಥ್ಯ, ಅನುಭವ, ದಕ್ಷತೆ ಅಷ್ಟೇ ಚರ್ಚೆಯಾಗುತ್ತಿತ್ತು. ಆದರೆ, ಈ ಬಾರಿ ನಾನು ಹಾಗೂ ಎನ್‌ಡಿಎ ಅಭ್ಯರ್ಥಿ ರಾಮನಾಥ್‌ಕೋವಿಂದ್ ಸ್ಪರ್ಧಿಸುತ್ತಿದ್ದಂತೆ ಚುನಾವಣೆಗೆ ಜಾತಿಯ ಬಣ್ಣ ನೀಡುತ್ತಿರುವುದು ನಾಚಿಕೆಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಚುನಾವಣೆಯನ್ನು ದೇಶದ ದೃಷ್ಠಿಯಿಂದ ನೋಡಬೇಕೆ ಹೊರತು, ಅಭ್ಯರ್ಥಿಗಳ ಜಾತಿಯನ್ನಲ್ಲ. ತತ್ವಾದರ್ಶಗಳು ಮುಖ್ಯವಾಗಬೇಕು. ವ್ಯಕ್ತಿಯನ್ನು ಜಾತಿಯ ಮಾನದಂಡದಿಂದ ಅಳೆಯುವ ಪ್ರವೃತ್ತಿ ನಿಲ್ಲಬೇಕು ಎಂದು ಮೀರಾಕುಮಾರ್ ಆಗ್ರಹಿಸಿದರು.

ಐದು ದಿನಗಳ ಹಿಂದೆ ನಾನು ರಾಷ್ಟ್ರದ ಎಲ್ಲ ಶಾಸಕರು, ಸಂಸದರಿಗೆ ಪತ್ರ ಬರೆದಿದ್ದೇನೆ. ನೀವೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತಿದ್ದೀರಿ. ಇಂತಹ ಸಂದರ್ಭದಲ್ಲಿ ನಿಮಗೆ ಜಾತ್ಯತೀತ ತತ್ವ ಬೇಕೋ ಅಥವಾ ಬೇರೆ ತತ್ವ ಬೇಕೋ ಆಯ್ಕೆ ನಿಮ್ಮದು. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕುವಂತೆ ಕೋರಿದ್ದೇನೆ ಎಂದು ಅವರು ಹೇಳಿದರು.

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಐತಿಹಾಸಿಕವಾದದ್ದು. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಸಭೆ ಸೇರಿದ ದೇಶದ 17 ಪ್ರಮುಖ ವಿರೋಧ ಪಕ್ಷಗಳು, ಸರ್ವಾನುಮತದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅದರಂತೆ, ನಾನು ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದೇನೆ ಎಂದು ಮೀರಾಕುಮಾರ್ ತಿಳಿಸಿದರು.

ಚುನಾವಣೆ ಗೆಲ್ಲಲು ಅಗತ್ಯವಿರುವಷ್ಟು ಬಹುಮತವಿಲ್ಲ ಎಂಬ ಕಾರಣಕ್ಕೆ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ. ಎಲ್ಲಿ ಹೋದರೂ ನಿಮಗೆ ಗೆಲುವಿಗೆ ಅಗತ್ಯವಾದ ಮತಗಳು ಇಲ್ಲ ಎಂದು ಕೇಳುತ್ತಿದ್ದಾರೆ. ಮತಗಳಿಕೆ ಮೊದಲೆ ನಿರ್ಧಾರವಾಗುವಂತಿದ್ದರೆ ಚುನಾವಣೆ ಏಕೆ ಬೇಕು. ನಾನು ಓರ್ವ ಹೋರಾಟಗಾರ್ತಿ, ಹೋರಾಟವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು.

 ಜಾತ್ಯತೀತ ತತ್ವ, ಸರ್ವಧರ್ಮವನ್ನು ಗೌರವಿಸುವ ವಿಚಾರಧಾರೆ ಹಾಗೂ ಸರ್ವರನ್ನು ಒಳಗೊಂಡ ಅಭಿವೃದ್ಧಿಗಾಗಿ ಹೋರಾಟ ಅನಿವಾರ್ಯ. ಸಾಮಾಜಿಕ ನ್ಯಾಯ ನಮ್ಮ ಪ್ರಮುಖ ತತ್ವ. ಹಲವು ದಶಕಗಳಿಂದ ನಾವು ಸಾಮಾಜಿಕ ನ್ಯಾಯಕ್ಕಾಗಿ ದುಡಿದಿದ್ದೇವೆ. ಜಾತಿ ನಿರ್ಮೂಲನೆ, ಬಡತನ ನಿರ್ಮೂಲನೆಯ ತತ್ವ, ಆಲೋಚನೆ ನಮ್ಮದು ಎಂದು ಮೀರಾಕುಮಾರ್ ತಿಳಿಸಿದರು.

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಸಬರಮತಿ ಆಶ್ರಮದಿಂದ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದೇನೆ. ಗಾಂಧೀಜಿ ಪ್ರತಿಪಾದಿಸಿದ ಜಾತ್ಯತೀತ, ಸಹಿಷ್ಣುತೆ, ಸರ್ವಧರ್ಮಗಳನ್ನು ಗೌರವಿಸುವ ಆದರ್ಶಗಳನ್ನು ಮುಂದಿಟ್ಟುಕೊಂಡೆ ಸಾಗುತ್ತಿದ್ದೇನೆ. ದೇಶದ ಎಲ್ಲ ರಾಜ್ಯಗಳಿಗೂ ಹೋಗುತ್ತೇನೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ಗೂ ಪತ್ರ ಬರೆದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಮಾಧ್ಯಮಗಳಿಗೆ ನೀತಿ ಪಾಠ: ದೇಶದಲ್ಲಿ ಇತ್ತೀಚೆಗೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಹೊರ ಜಗತ್ತಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಯಶಸ್ವಿಯಾಗಿ ಮಾಡುತ್ತಿವೆ. ಇದಕ್ಕಾಗಿ ನಾವು ಮಾಧ್ಯಮಗಳನ್ನು ಅಭಿನಂದಿಸುತ್ತೇವೆ ಎಂದು ಮೀರಾಕುಮಾರ್ ತಿಳಿಸಿದರು.

ಆದರೆ, ಎಲ್ಲ ವಿಚಾರಗಳಲ್ಲೂ ಜಾತಿಯನ್ನು ಎಳೆದು ತರುವುದು ಸರಿಯಾದ ಕ್ರಮವಲ್ಲ. ಇದು ದಲಿತರಿಗೆ ಮಾನಸಿಕವಾಗಿ ನೋವು ಹಾಗೂ ಮತ್ತೆ ಅತ್ಯಾಚಾರ ಮಾಡಿದಂತಾಗುತ್ತದೆ ಎಂದು ಪರೋಕ್ಷವಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಜಾತಿ ವಿಷಯಕ್ಕೆ ಮಾಧ್ಯಮಗಳಲ್ಲಿ ಹೆಚ್ಚು ಒತ್ತು ನೀಡುತ್ತಿರುವದಕ್ಕೆ ಅವರು ತಮ್ಮ ಅಸಮಾಧಾನ ಹೊರಹಾಕಿದರು.

ಎಚ್.ಡಿ.ದೇವೇಗೌಡರಿಗೆ ಧನ್ಯವಾದ: ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ನಾಮಪತ್ರಕ್ಕೆ ಸೂಚಕರಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹಿ ಹಾಕಿದ್ದಾರೆ. ಇವತ್ತು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಬೆಂಬಲ ಕೋರಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೂ ಧನ್ಯವಾದಗಳು ಎಂದು ಮೀರಾಕುಮಾರ್ ತಿಳಿಸಿದರು.

ಸನ್ಮಾನ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಎಲ್ಲ ಶಾಸಕರು, ಸಂಸರಿಗೆ ಮೀರಾಕುಮಾರ್ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ವತಿಯಿಂದ ಮೀರಾಕುಮಾರ್‌ಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಶಾಸಕರು, ಸಂಸದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News