ಪತ್ರಕರ್ತರಿಬ್ಬರಿಗೂ ವಿಧಾನಸಭೆ ಸ್ಪೀಕರ್ ಮುಂದೆ ಹಾಜರಾಗಲು ಹೈಕೋರ್ಟ್ ಆದೇಶ
ಬೆಂಗಳೂರು, ಜು.1: ಅವಹೇಳನಕಾರಿ ವರದಿಗಳನ್ನು ಪ್ರಕಟಿಸಿದ್ದಾರೆನ್ನುವ ಆರೋಪದ ಮೇಲೆ ಹಕ್ಕುಬಾಧ್ಯತಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ವಿಧಾನಸಭೆಯಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪತ್ರಕರ್ತ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್‌ಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಮುಂದೆ ಹಾಜರಾಗಲು ಹೈಕೋರ್ಟ್ ಆದೇಶಿಸಿದೆ.
ಬಂಧನಕ್ಕೆ ತಡೆಯಾಜ್ಞೆ ಕೋರಿ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್‌ಗೆ ಸೋಮವಾರ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಮುಂದೆ ಹಾಜರಾಗಲು ಆದೇಶಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಶಂಕರಪ್ಪ ಅವರು, ಅರ್ಜಿದಾರರು ಸ್ಪೀಕರ್ ಮುಂದೆ ಹಾಜರಾದಾಗ ಬಂಧಿಸುವ ಭೀತಿ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರನ್ನು ಬಂಧಿಸದಂತೆ ಆದೇಶಿಸಿ ಎಂದು ವಕೀಲ ಶಂಕರಪ್ಪ ಅವರು ನ್ಯಾಯಪೀಠಕ್ಕೆ ಪದೇ ಪದೇ ಮನವಿ ಮಾಡಿಕೊಂಡರು.
ಸರಕಾರದ ಪರ ವಾದಿಸಿದ ಪೊನ್ನಣ್ಣ ಅವರು, ಆರೋಪಿಗಳಾದ ರವಿ ಬೆಳಗೆರೆ ಹಾಗೂ ಅನಿಲ್‌ರಾಜ್ ಅವರು ಸ್ಪೀಕರ್ ಮುಂದೆ ಹಾಜರಾದಾಗ ಯಾವುದೇ ಕಾರಣಕ್ಕೂ ಬಂಧಿಸುವ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಒಂದು ವೇಳೆ ಅರ್ಜಿದಾರರನ್ನು ಬಂಧಿಸಿದರೆ ಯಾವುದೇ ಹೊತ್ತಿನಲ್ಲಾದರೂ ಕೋರ್ಟ್‌ಗೆ ಬರಬಹುದು ಎಂದು ವಕೀಲ ಶಂಕರಪ್ಪಗೆ ನ್ಯಾಯಪೀಠವು ಭರವಸೆ ನೀಡಿತು.
ಅಲ್ಲದೆ, ಇನ್ನು ಮಂದೆ ಅರ್ಜಿದಾರರು ಯಾವುದೇ ಅವಿಧೇಯತೆ ಪ್ರದರ್ಶಿಸಿದರೆ ಅಥವಾ ಸೊಂಟದ ಕೆಳಗಿನ ಭಾಷೆ ಬಳಸಿದರೆ ಸದನ ನಿಮ್ಮ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಗಂಭೀರ ಎಚ್ಚರಿಕೆ ನೀಡಿದ ನ್ಯಾಯಪೀಠವು ಪತ್ರಿಕೋದ್ಯಮವನ್ನು ಪ್ರಜಾತಾಂತ್ರಿಕ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗಿ ಎಂದು ವೌಖಿಕ ಸಲಹೆ ನೀಡಿದರು.
ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಸೋಮವಾರ ಮೂರು ಗಂಟೆಗೆ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗಲಿ. ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಿ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಿ ಎಂದು ನ್ಯಾಯಪೀಠವು ಆದೇಶಿಸಿತು. ವಕೀಲ ಶಂಕರಪ್ಪ ಅವರು ಅರ್ಜಿಯನ್ನು ಹಿಂಪಡೆದರು.
ಜೂನ್ 21 ರಂದು ವಿಧಾನಸಭೆಯಲ್ಲಿ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಆದರೆ ರವಿ ಬೆಳಗೆರೆ ಅವರು ಧಾರವಾಡದ ಆಸ್ಪತ್ರೆಯಲ್ಲಿದ್ದ ಪರಿಣಾಮವಾಗಿ ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆಯೇ ಕಳೆದ ಮಂಗಳವಾರ ಹೈಕೋರ್ಟ್ ಮುಂದೆ ನಿರೀಕ್ಷಣಾ ಜಾಮೀನಿಗೆ ಬೆಳಗೆರೆ ಹಾಗೂ ಅನಿಲ್ ರಾಜ್ ಅರ್ಜಿ ಸಲ್ಲಿಸಿದ್ದರು.