ಸಾಂವಿಧಾನಿಕ ಹುದ್ದೆಗಳಿಗೆ ಸಂವಿಧಾನ ವಿರೋಧಿ ವ್ಯಕ್ತಿಗಳನ್ನು ಏರಿಸಬೇಡಿ: ಪ್ರಶಾಂತ್ ಭೂಷಣ್
ಬೆಂಗಳೂರು, ಜು.1: ದೇಶದ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳು ಹಾಗೂ ಮೌಲ್ಯಗಳು ಅಪಾಯದ ಅಂಚಿನಲ್ಲಿರುವಾಗ ಸಂವಿಧಾನ ವಿರೋಧಿ ವ್ಯಕ್ತಿಗಳನ್ನು ಸಾಂವಿಧಾನಿಕ ಹುದ್ದೆಗಳಿಗೆ ಏರುವುದನ್ನು ತಪ್ಪಿಸುವ ಅವಶ್ಯಕತೆಯಿದೆ ಎಂದು ಸಾಮಾಜಿಕ ಹೋರಾಟಗಾರ ಮತ್ತು ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಪ್ರಜಾಸತ್ತೆ ಹಾಗೂ ಕೋಮುಸೌಹಾರ್ದ ವೇದಿಕೆ (ಎಫ್‌ಡಿಸಿಎ)-ಕರ್ನಾಟಕ ಇದರ ವತಿಯಂದ ನಗರದ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ಭಾರತೀಯ ಪ್ರಜಾಪ್ರಭುತ್ವದ ಪ್ರಚಲಿತ ಸಮಸ್ಯೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋರಕ್ಷಣೆಯ ಹೆಸರಲ್ಲಿ ಕೆಲವರು ನಡೆಸುತ್ತಿರುವ ಸ್ವಯಂಘೋಷಿತ ಅಭಿಯಾನಕ್ಕೆ ಪರ್ಯಾಯವಾಗಿ ಸಂವಿಧಾನದ ರಕ್ಷಣೆ ಹೆಸರಿನ ಜನಚಳವಳಿ ನಡೆಸಬೇಕಾಗಿದೆ ಎಂದು ಹೇಳಿದರು.
ದೇಶದ ಸಂವಿಧಾನದ ಪ್ರತಿಯೊಬ್ಬ ನಾಗರಿಕನಿಗೆ ಕೊಟ್ಟಿರುವ ಮೂಲಭೂತ ಹಕ್ಕುಗಳು ಮತ್ತು ಮೌಲ್ಯಗಳು ಅಪಾಯದಲ್ಲಿವೆ. ಭ್ರಷ್ಟಾಚಾರ ತಡೆ ಕಾನೂನುಗಳನ್ನು ದುರ್ಬಲಗೊಳಿಸಿ ಹೋರಾಟಗಳನ್ನು ಹತ್ತಿಕ್ಕಲಾಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಅಶಕ್ತಗೊಳಿಸಲಾಗುತ್ತಿದೆ. ಮಾಧ್ಯಮಗಳ ಸ್ವಾತಂತ್ರ ಕಸಿದುಕೊಳ್ಳಲಾಗುತ್ತಿದೆ. ಚುನಾವಣೆಗಳಲ್ಲಿ ಹಣ, ಜಾತಿಯ ಪ್ರಭಾವ ಹೆಚ್ಚಾಗುತ್ತಿದೆ. ಸಂವಿಧಾನ ವಿರೋಧಿ ವ್ಯಕ್ತಿಗಳು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಲಪಡಿಸುವ, ಜನರಲ್ಲಿ ಜಾಗೃತಿ ಮೂಡಿಸುವ, ಕಾನೂನು ಹೋರಾಟ ನಡೆಸುವ ಮತ್ತು ಪ್ರಬಲ ಜನಚಳವಳಿ ಮೂಲಕ ಇದನ್ನು ಎದುರಿಸಬೇಕಾಗಿದೆ ಎಂದು ಭೂಷಣ್ ಸಲಹೆ ನೀಡಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ಕೋಮುವಾದ, ಮೂಲಭೂತವಾದ ಮತ್ತು ಭ್ರಷ್ಟಾಚಾರದ ಜೊತೆಗೆ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕಾದರೆ, ಈ ಸಮಾಜದಿಂದ ಕೋಮುವಾದ, ಮೂಲಭೂತವಾದ ಮತ್ತು ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು. ರಾಜಕೀಯ ಪ್ರಜಾಪ್ರಭುತ್ವದ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನು ಇಂದು ಚುನಾವಣೆಗಳಿಗೆ ಜೋಡಿಸಬೇಕಾಗಿದೆ. ರಾಜಕೀಯ ಕ್ಷೇತ್ರಗಳಲ್ಲಿ ಮೌಲ್ಯಗಳನ್ನು ಪ್ರತಿಷ್ಠಾಪಿಸುವ ಮತ್ತು ಸಂಘಟಿತ ಹೋರಾಟದ ಮೂಲಕ ಬದಲಾವಣೆ ತರಬಹುದು ಎಂದರು.
ಹೊಸದಿಲ್ಲಿಯ ರೆಡಿಯನ್ಸ್ ಸಾಪ್ತಾಹಿಕದ ಸಂಪಾದಕ ಇಜಾಝ್ ಅಹ್ಮದ್ ಅಸ್ಲಂ ಮಾತನಾಡಿ, ದೇಶ ಉಳಿಯಬೇಕಾದರೆ ಪ್ರಜಾಪ್ರಭುತ್ವ ಉಳಿಯಬೇಕು. ಕೇವಲ ನದಿ, ಪರ್ವತಗಳಿದ್ದರೆ ಅದು ದೇಶ ಆಗುವುದಿಲ್ಲ. ಜೀವಂತ ದೇಶದ ಅಸ್ತಿತ್ವ ಕಾಣಬೇಕಾದರೆ ಅಲ್ಲಿ ಮನುಷ್ಯರು ಇರಬೇಕು. ಆದರೆ, ಇಂದು ಮನುಷ್ಯರ ಸಾಂವಿಧಾನಿಕ ಹಕ್ಕುಗಳ ದಮನ ಮಾಡಿ ಅವರ ಘನತೆ ಮತ್ತು ಸ್ವಾಭಿಮಾನವನ್ನು ಹರಾಜು ಹಾಕಲಾಗುತ್ತಿದೆ. ಅದಕ್ಕಾಗಿ ಇಂದು ನಾವು ಸಂವಿಧಾನದ ಮೂಲ ಆಶಯಗಳತ್ತ ಮರಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಸೇಂಟ್ ಅಲೋಶಿಯೆಸ್ ಕಾಲೇಜು ಪ್ರಾಂಶುಪಾಲ ಫಾದರ್ ಆ್ಯಂಬ್ರೋಸ್ ಪಿಂಟೋ, ಸೇಂಟ್ ಜೊಸೇಫ್ ಕಾಲೇಜು ಪ್ರಾಂಶುಪಾಲ ಡಾ. ಫಾದರ್ ವಿಕ್ಟರ್ ಲೊಬೋ, ಎಫ್‌ಡಿಸಿಎ ಪ್ರಧಾನ ಕಾರ್ಯದರ್ಶಿ ಎಂ.ಎಫ್. ಪಾಷಾ ಮತ್ತಿತರರು ಉಪಸ್ಥಿತರಿದ್ದರು.