ಪೇಜಾವರ ಶ್ರೀಗಳಿಗೆ ಅಭಿನಂದನೆ ಸಲ್ಲಿಕೆ: ಸಯೀದ್‌ ಅಹ್ಮದ್

Update: 2017-07-02 12:48 GMT

ಬೆಂಗಳೂರು, ಜು.2: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುಸ್ಲಿಮರಿಗಾಗಿ ರಮಝಾನ್ ಮಾಸದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ ಪೇಜಾವರ ಶ್ರೀಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ.ಸಯೀದ್‌ ಅಹ್ಮದ್ ತಿಳಿಸಿದ್ದಾರೆ.

ರವಿವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೇಜಾವರ ಶ್ರೀಗಳ ವಿರುದ್ಧ ಶ್ರೀರಾಮಸೇನೆ ಇಂದು ನಡೆಸಿದ ಪ್ರತಿಭಟನೆ ಅತ್ಯಂತ ಖಂಡನೀಯವಾದದ್ದು. ಧಾರ್ಮಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಪೇಜಾವರ ಶ್ರೀ ಕೈಗೊಂಡ ಈ ಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದರು.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಉಪಾಧ್ಯಕ್ಷ ವೌಲಾನ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಅವರಿಂದ ಪೇಜಾವರ ಶ್ರೀಗಳಿಗಾಗಿ ಅಭಿನಂದನೆ ಪತ್ರವನ್ನು ಸ್ವೀಕರಿಸಿ, ಜು.4 ಅಥವಾ 5ರಂದು ಉಡುಪಿಯಲ್ಲಿ ಸ್ವಾಮೀಜಿಯನ್ನು ಭೇಟಿ ಮಾಡಿ ಗೌರವಿಸಿ, ಅಭಿನಂದನಾ ಪತ್ರವನ್ನು ಹಸ್ತಾಂತರಿಸಲಾಗುವುದು ಎಂದು ಸಯೀದ್‌ ಅಹ್ಮದ್ ಹೇಳಿದರು.
 
ರಾಜ್ಯದಲ್ಲಿ ಅಲ್ಪಸಂಖ್ಯಾತರು ಬಾಹುಳ್ಯವಿರುವ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರು ಮನೆಗೆ ಮನೆಗೆ ತೆರಳಿ ತ್ರಿವಳಿ ತಲಾಕ್ ಹಾಗೂ ಸಮಾನ ನಾಗರಿಕ ಸಂಹಿತೆಯ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು. ಉತ್ತರಪ್ರದೇಶದಲ್ಲಿ ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿದ ಸೂತ್ರವನ್ನೇ ಬಿಜೆಪಿ ಈಗ ನಮ್ಮ ರಾಜ್ಯದಲ್ಲಿಯೂ ಪ್ರಯೋಗಿಸಲು ಮುಂದಾಗಿದೆ. ಅವರಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಸಜ್ಜಾಗಿದೆ ಎಂದು ಸಯೀದ್‌ ಅಹ್ಮದ್ ಹೇಳಿದರು.

ಈದ್ ಮಿಲನ್: ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ಜು.8ರಂದು ಸಂಜೆ 6 ಗಂಟೆಗೆ ನಗರದ ಅರಮನೆ ಮೈದಾನದಲ್ಲಿ ಈದ್ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖುರ್ಷಿದ್‌ ಅಹ್ಮದ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News