×
Ad

ಜಿಎಸ್ಟಿ ಜಾರಿಯಿಂದ ಬಡವ-ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಲಿದೆ: ಪಿಯುಶ್ ಗೋಯಲ್

Update: 2017-07-02 20:24 IST

ಬೆಂಗಳೂರು, ಜು.2: ದೇಶಾದ್ಯಂತ ಏಕ ತೆರನಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾಗಿದ್ದು, ಇದರಿಂದ, ಬಡವ ಹಾಗೂ ಶ್ರೀಮಂತರ ನಡುವಿನ ಅಂತರ ಕಡಿಮೆಯಾಗುತ್ತದೆ ಎಂದು ಕೇಂದ್ರ ಸಚಿವ ಪಿಯುಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
             
ರವಿವಾರ ಸಂಜಯನಗರದ ಶ್ರೀರಮಣ ಮಹರ್ಷಿ ಹೆರಿಟೇಜ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಯೋಜನೆಯ ಬಗ್ಗೆ ಒಂದು ಅವಲೋಕನ ಹಾಗೂ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಎಸ್‌ಟಿ ಜಾರಿಯಿಂದಾಗಿ ಖೊಟ್ಟಿ ಕಂಪೆನಿಗಳು ಹಾಗೂ ತೆರಿಗೆ ವಂಚಿತರು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದರ ಜತೆಗೆ ಬಡವ ಹಾಗೂ ಶ್ರೀಮಂತರ ನಡುವಿನ ಅಂತರ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ 500 ರೀತಿಯ ತೆರಿಗೆಗಳನ್ನು ಪಾವತಿಸುತ್ತಿದ್ದೆವು. ಆದರೆ, ಚಿದಂಬರಂ ಅವರು ಯುಪಿಎ ಸರಕಾರದಲ್ಲಿ ಸಚಿವರಾಗಿದ್ದಾಗ ಜಿಎಸ್‌ಟಿಯನ್ನು ಜಾರಿಗೆ ತರಲು ಸಿದ್ಧತೆಯನ್ನು ನಡೆಸಿದ್ದರು. ಆದರೆ, ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದ ಮೇಲೆ ಜಿಎಸ್‌ಟಿಯನ್ನು ಜಾರಿಗೊಳಿಸಿ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾಗಿದೆ ಎಂದು ಹೇಳಿದರು.

ತೆರಿಗೆ ಪಾವತಿಸುವ ಮೂಲಕ ಈ ದೇಶಕ್ಕೆ ಗೌರವ ಸಲ್ಲಿಸಬೇಕಾಗಿದೆ. ಅಲ್ಲದೆ, ಈ ಜಿಎಸ್‌ಟಿಯನ್ನು ಎಲ್ಲ ಪಕ್ಷಗಳ ಮುಖಂಡರು ಹಾಗೂ ದೇಶದ ಜನರು ಒಮ್ಮತದಿಂದ ಸ್ವಾಗತಿಸಿದ್ದಾರೆ. ಈ ರೀತಿಯ ತೆರಿಗೆ ಜಾರಿಯಿಂದಾಗಿ ಗ್ರಾಹಕರು ಮೋಸಕ್ಕೆ ಒಳಗಾಗುವುದಿಲ್ಲ. ಹಾಗೂ ತೆರಿಗೆ ವಂಚಿತರು ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಎಸ್‌ಟಿ ಜಾರಿಯಿಂದಾಗಿ ಕಾನೂನು ಬಾಹಿರವಾಗಿ ರೀಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದ ದಂಧೆಕೊರರಿಗೆ ಕಡಿವಾಣ ಬೀಳಲಿದ್ದು, ಇದರಿಂದ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಾಗೂ ಬಡವ ಹಾಗೂ ಮಧ್ಯಮ ವರ್ಗದವರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News