ಗೋ ಸೇವೆ ಹೆಸರಿನಲ್ಲಿ ಅತ್ತಿಗೆ ಅಪರ್ಣಾರ ಸಂಸ್ಥೆಗೆ ಕೋಟ್ಯಂತರ ಅನುದಾನ ನೀಡಿದ್ದ ಅಖಿಲೇಶ್ ಯಾದವ್

Update: 2017-07-03 04:46 GMT

ಆಗ್ರಾ ಜು.3: ಕುಟುಂಬ ರಾಜಕೀಯ ಮತ್ತು ಸ್ವಜನ ಪಕ್ಷಪಾತದ ಆರೋಪ ಎದುರಿಸುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಗೋಸೇವಾ ಆಯೋಗಕ್ಕೆ ಹಂಚಿಕೆಯಾಗಿದ್ದ ಅನುದಾನದ ಪೈಕಿ ಶೇಕಡ 86ರಷ್ಟು ಹಣವನ್ನು ಅವರ ಅತ್ತಿಗೆ ಅಪರ್ಣಾ ಯಾದವ್ ಅವರ ಸ್ವಯಂಸೇವಾ ಸಂಸ್ಥೆ ಕೊಳ್ಳೆ ಹೊಡೆದಿರುವುದು ಬಹಿರಂಗವಾಗಿದೆ.

ಅಪರ್ಣಾ ಹುಟ್ಟುಹಾಕಿದ ಜೀವ ಆಶ್ರಯ ಎಂಬ ಸ್ವಯಂಸೇವಾ ಸಂಸ್ಥೆ, ಲಕ್ನೋ ನಗರ ನಿಗಮ ಮಾಲಕತ್ವದ ಕನ್ಹಾ ಉಪವನ್ ಗೋಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ರಾಜ್ಯ ಸರ್ಕಾರ 2012ರಿಂದ 2017ರವರೆಗೆ ಐದು ವರ್ಷಗಳಲ್ಲಿ ಗೋಸೇವಾ ಆಯೋಗದ ಮೂಲಕ ಗೋಸಂರಕ್ಷಣೆಗಾಗಿ 9.66 ಕೋ.ರೂ. ಬಿಡುಗಡೆ ಮಾಡಿದ್ದು, ಈ ಪೈಕಿ 8.35 ಕೋ.ರೂ. ಈ ಎನ್‌ಜಿಒ ಪಾಲಾಗಿದೆ. ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಸಂಜಯ್ ಯಾದವ್, ಆರ್‌ಟಿಐ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಿಂದ ಈ ಅಂಶ ಬಹಿರಂಗವಾಗಿದೆ.

ಆರ್‌ಟಿಐ ಕಾರ್ಯಕರ್ತ ನೂತನ್ ಠಾಕೂರ್ ಎಂಬುವವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. 2012-13, 13-14 ಹಾಗೂ 14-15ರ ಅವಧಿಯಲ್ಲಿ ಜೀವ ಆಶ್ರಯ ಸಂಸ್ಥೆ ಕ್ರಮವಾಗಿ 50 ಲಕ್ಷ ರೂ., 1.25 ಕೋ.ರೂ. ಹಾಗೂ 1.41 ಕೋ.ರೂ. ಅನುದಾನ ಪಡೆದಿತ್ತು. 2015-16ರಲ್ಲಿ ಜೀವ ಆಶ್ರಯದ 2.58 ಕೋ.ರೂ. ಪಡೆದಿತ್ತು. ಅಂತೆಯೇ 2016-17ರಲ್ಲಿ 2.55 ಕೋ.ರೂ. ಅನುದಾನ ಕಬಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News