ಕಂಪೆನಿಯ ಮಾಹಿತಿ ದುರುಪಯೋಗ: ಆರೋಪ

Update: 2017-07-04 12:07 GMT

ಬೆಂಗಳೂರು, ಜು.4: ಕಂಪೆನಿಯ ಮಾಹಿತಿ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಇಂಜಿನಿಯರ್‌ನೋರ್ವನನ್ನು ನಗರದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಲ್ಯಾಪ್‌ಟಾಪ್ ವಶಕ್ಕೆ ಪಡೆದಿದ್ದಾರೆ.

ನಗರದ ಕೆಆರ್‌ಪುರಂ ಬಳಿಯ ವಿನಾಯಕನಗರ 3ನೆ ಕ್ರಾಸ್ ನಿವಾಸಿ ವಿ.ಎಂ.ಶ್ರೀಶರಾವ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಪ್ರತಿಷ್ಠಿತ ದಿ ನ್ಯೂ ಜನರೇಷನ್ ಎಂಬ ಕಂಪೆನಿಯಲ್ಲಿ ಸಿಎಡಿಸಿ ಇಂಜಿನಿಯರ್ ಆಗಿದ್ದ ಶ್ರೀಶ ಅವರು ರೇಡಿಯಸ್ ಮ್ಯಾಪ್‌ಗಳನ್ನು ತಯಾರಿಸುವ ಜವಾಬ್ದಾರಿ ಹೊಂದಿದ್ದರು. ಆದರೆ, ಅನುಮತಿ ಪಡೆಯದೇ ಕಂಪೆನಿಗೆ ಸಂಬಂಧಿಸಿದ ಮಾಹಿತಿಯನ್ನು (ಡಾಟಾ) ತನ್ನ ಲ್ಯಾಪ್‌ಟಾಪ್‌ಗೆ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿದ್ದರು. ಇದನ್ನು ಎಸ್‌ಬಿಟಿ ಅಸೋಸಿಯೇಟ್ಸ್ ಎಂಬ ಮತ್ತೊಂದು ಕಂಪೆನಿಗೆ ಇ-ಮೇಲ್ ಮೂಲಕ ವರ್ಗಾವಣೆ ಮಾಡಿ, ವ್ಯವಹಾರ ಕುದುರಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಈ ಬಗ್ಗೆ ಕಂಪನಿಯ ವ್ಯವಸ್ಥಾಪಕರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಶ್ರೀಶ ರಾವ್ ಬೇರೆ ಕಂಪೆನಿಗೆ ಡಾಟಾ ಕಳುಹಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News