×
Ad

ಮದ್ಯದಂಗಡಿ ಸ್ಥಳಾಂತರದಲ್ಲಿ ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು

Update: 2017-07-04 17:52 IST

ಬೆಂಗಳೂರು, ಜು.4: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮದ್ಯದಂಗಡಿಗಳ ನವೀಕರಣ, ಸ್ಥಳಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

 ಮಂಗಳವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕೇಂದ್ರ ಕಚೇರಿಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಸಲ್ಲಿಸಿದರು.

ದೂರಿನಲ್ಲಿ ಏನಿದೆ: ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿ ಇರಬಾರದೆಂದು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಹೆದ್ದಾರಿಗಳಲ್ಲಿ ಅಕ್ರಮ ಮದ್ಯದಂಗಡಿಗಳಿವೆ. ಇದಲ್ಲದೆ ನಗರದೊಳಗಿರುವ ಮದ್ಯದಂಗಡಿಗಳಿಗೂ ನವೀಕರಣ, ಸ್ಥಳಾಂತರದ ಭೀತಿ ಶುರುವಾಗಿದೆ. ಇದನ್ನೆ ತಮ್ಮ ಲಂಚತನಕ್ಕೆ ಬಳಸಿಕೊಳ್ಳುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯದಂಗಡಿ ಮಾಲಕರಿಂದ ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

 ಮದ್ಯದಂಗಡಿಗಳ ಪರವಾನಗಿ ಸ್ಥಳಾಂತರ ಮತ್ತು ನವೀಕರಣ ನೆಪದಲ್ಲಿ ಅಧಿಕಾರಿಗಳು ಲಂಚ ವಸೂಲಿ ಮಾಡುತ್ತಿದ್ದು, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ಅನೇಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅದಕ್ಕೆ ಯಾವ ಕಾರಣಗಳನ್ನೂ ಅಧಿಕಾರಿಗಳು ನೀಡುತ್ತಿಲ್ಲ. ಕೇವಲ ಲಂಚ ನೀಡಲಿ ಎಂಬ ಉದ್ದೇಶದಿಂದ ಬಾರ್ ಮಾಲಕರಿಗೆ ಅಲೆದಾಡಿಸುತ್ತಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ದೂರಿನಲ್ಲಿ ಹೇಳಿದ್ದಾರೆ.

  ರಾಜ್ಯದಲ್ಲಿ ಒಟ್ಟು 3515 ಮದ್ಯದಂಗಡಿಗಳ ನವೀಕರಣ ರದ್ದುಗೊಳಿಸಲಾಗಿದ್ದು, ನೈಜತೆ ಬಗ್ಗೆ ತಿಳಿಯಲು ತನಿಖೆ ಅಗತ್ಯವಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು, ಅಬಕಾರಿ ಅಧಿಕಾರಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಹೀಗಾಗಿ, ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಜವಾಬ್ದಾರಿ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಎಸಿಬಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೂ ಸಲ್ಲಿಸಲಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳ ಸೂಕ್ತ ತನಿಖೆ ನಡೆಸಬೇಕು’.

-ರವಿಕೃಷ್ಣಾರೆಡ್ಡಿ, ಅಧ್ಯಕ್ಷ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News