ನವೋದ್ಯಮಿ ಪ್ರತಿಭೆಗಳಿಗೆ ಪ್ರೋತ್ಸಾಹ: ಪ್ರಿಯಾಂಕ್‌ಖರ್ಗೆ
ಬೆಂಗಳೂರು, ಜು.4: ರಾಜ್ಯ ಸರಕಾರವು ‘ಎಲಿವೇಟ್ 100’ ಯೋಜನೆಯಡಿ 100 ಅತ್ಯುತ್ತಮ ಆವಿಷ್ಕಾರಿ ನವೋದ್ಯಮಿಗಳನ್ನು ಗುರುತಿಸಿ, ಅವರ ಮುಂದಿನ ಹಂತದ ಬೆಳವಣಿಗೆಗಾಗಿ ಅಗತ್ಯ ನೆರವು ಒದಗಿಸಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಎಲಿವೇಟ್ 100ನ ವೆಬ್‌ಸೈಟ್ www.elevate.bengaluruite.biz ಹಾಗೂ ಲಾಂಛನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಾದ್ಯಂತ ಇರುವ ನವೋದ್ಯಮಿಗಳು ಉದ್ಯಮದಲ್ಲಿ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗುವಂತೆ ಮಾರ್ಗದರ್ಶನ ನೀಡುವುದರ ಜೊತೆಗೆ ಮಾರುಕಟ್ಟೆ, ಅವಕಾಶ, ಚಿಂತನೆಗಳ ಪ್ರಮಾಣೀಕರಣ ಸೌಲಭ್ಯ ಸೇರಿದಂತೆ ಕಾನೂನು ಹಾಗೂ ಉದಯೋನ್ಮುಖ ತಂತ್ರಜ್ಞಾನ ಬಗ್ಗೆ ಸಲಹೆಗಳನ್ನು ಸರಕಾರ ನೀಡಲಿದೆ. ಇದಕ್ಕಾಗಿ 400 ಕೋಟಿ ರೂ.ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.
ಇದೇ ಮೊದಲ ಬಾರಿಗೆ ರಾಜ್ಯ ಸರಕಾರವು ಮಂಗಳೂರು, ಕಲಬುರಗಿ, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿರುವ ನವೋದ್ಯಮ(ಸ್ಟಾರ್ಟ್‌ಅಪ್)ಗಳಿಗೆ ಮುಕ್ತ ಅವಕಾಶವೊಂದನ್ನು ನೀಡುತ್ತಿದೆ. ಈ ಜಿಲ್ಲೆಗಳಿಂದ ಬರುವ ನವೋದ್ಯಮಗಳು ತಮ್ಮ ಚಿಂತನೆಗಳನ್ನು ಎಲಿವೇಟ್ ತಂಡದೊಂದಿಗೆ ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಎಲಿವೇಟ್‌ಗೆ ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯು ಜು.4ರಿಂದ ಜು.18ರವರೆಗೆ ನಡೆಯಲಿದೆ. ನವೋದ್ಯಮಿಗಳಿಗೆ ನಮ್ಮ ರಾಜ್ಯವು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಬಗ್ಗೆ ಈಗಾಗಲೇ ನೀಡಿರುವ ಭರವಸೆಯನ್ನು ನನಸು ಮಾಡುವತ್ತ ಹೆಜ್ಜೆ ಇಟ್ಟಿದ್ದು, ಮುಕ್ತ ಅವಕಾಶವನ್ನು ತೆರೆದಿಡಲಾಗಿದೆ ಎಂದು ಅವರು ಹೇಳಿದರು. ಈವರೆಗೆ 46 ನವೋದ್ಯಮಗಳನ್ನು ಗುರುತಿಸಿದ್ದು, 15.68 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದೇವೆ. ಇದರಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರ (26 ಸ್ಟಾರ್ಟ್‌ಅಪ್, 10.70 ಕೋಟಿ ರೂ.), ಪ್ರವಾಸೋದ್ಯಮ(8 ಸ್ಟಾರ್ಟ್‌ಅಪ್, 1.80 ಕೋಟಿ ರೂ.) ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ(12 ಸ್ಟಾರ್ಟ್‌ಅಪ್, 3.18 ಕೋಟಿ ರೂ.) ಮೂಲಕ ಸಮರ್ಥ ನವೋದ್ಯಮಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನವೋದ್ಯಮಗಳ ಪ್ರೋತ್ಸಾಹಕ್ಕೆ ನಾವು ಕೇವಲ ಅನುದಾನವನ್ನಷ್ಟೇ ನೀಡುತ್ತಿಲ್ಲ. ಎಲ್ಲ ನವೋದ್ಯಮಗಳಿಗೆ ಅನುದಾನದ ಅಗತ್ಯತೆ ಇರುವುದಿಲ್ಲ. ಹೀಗಾಗಿ ಕೆಲವು ಕಡೆ ಅವರಿಗೆ ಬೇಕಾದಂತಹ ತಾಂತ್ರಿಕ ಮತ್ತು ವ್ಯಾಪಾರ ಸಂಬಂಧಿ ಪ್ರೋತ್ಸಾಹವನ್ನು ನಾವು ನೀಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದ ಸಹಭಾಗಿತ್ವದೊಂದಿಗೆ ದೇಶಪಾಂಡೆ ಫೌಂಡೇಶನ್, ದಿ ಇಂಡಸ್ ಎಂಟರ್‌ಫ್ಯೂನರ್ಸ್ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಎಲಿವೇಟ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸಣ್ಣ ನಗರ ಅಥವಾ ಪಟ್ಟಣಗಳಲ್ಲಿರುವ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಬೆಂಬಲಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್, ಅನಿಮೇಶನ್ ವಿಶುವಲ್ ಗೇಮಿಂಗ್ ಅಂಡ್ ಕಾಮಿಕ್ಸ್, ಜೈವಿಕ ತಂತ್ರಜ್ಞಾನ, ಫಾರ್ಮಾಸಿಟಿಕಲ್, ಕೃಷಿ ಮತ್ತು ಜೀವ ವಿಜ್ಞಾನ ಸೇರಿದಂತೆ ರಾಜ್ಯದಲ್ಲಿರುವ ಹಲವಾರು ಕ್ಷೇತ್ರ ಮತ್ತು ಉದ್ಯಮಗಳ ಆವಿಷ್ಕಾರಿ ಚಿಂತನೆಗಳುಳ್ಳ ಕಂಪೆನಿಗಳನ್ನು ಎಲಿವೇಟ್ ಮೂಲಕ ಗುರುತಿಸಲಾಗುತ್ತದೆ ಎಂದು ಅವರು ಹೇಳಿದರು.