ವಿಧಾನಸೌಧ ಎದುರು ಮಲ ಸುರಿದುಕೊಂಡು ಧರಣಿ
ಬೆಂಗಳೂರು, ಜು.4: ಬೆಂಗಳೂರು ಪೂರ್ವ ತಾಲೂಕಿನಲ್ಲಿ ಖಾಸಗಿ ಬಿಲ್ಡರ್‌ಗಳು ಅವ್ಯಾಹತವಾಗಿ ಸರಕಾರಿ ಭೂಮಿಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಅವುಗಳನ್ನು ತೆರವುಗೊಳಿಸಬೇಕು ಹಾಗೂ ಈ ಅಕ್ರಮಕ್ಕೆ ಸಹಕಾರ ನೀಡುತ್ತಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ರಾಜ್ಯ ಬಡವರ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಮಂಗಳವಾರ ವಿಧಾನಸೌಧದ ಎದುರು ಮಲ ಮೂರ್ತ ಸುರಿದುಕೊಂಡು ಧರಣಿ ನಡೆಸಿದ ಸಂಘಟನೆಯ ಕಾರ್ಯಕರ್ತರಾದ ಬಸವರಾಜ ಕಾಂತಿಮಠ, ಸುರೇಶ್, ಮಹೇಶ್ ಹಿರೇಮಠ, ಚಂದ್ರಶೇಖರ ಸೇರಿದಂತೆ ಇನ್ನಿತರರು, ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್, ವೈಟ್‌ಫೀಲ್ಡ್, ಕಾಡುಗುಡಿಯ ಕಂದಾಯ ನಿರೀಕ್ಷಕ, ತಾಲೂಕು ಸರ್ವೇಯರ್ ಶ್ರೀನಿವಾಸಚಾರ್ಯರನ್ನು ಕೂಡಲೆ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಪೂರ್ವ ತಾಲೂಕು, ಕೆ.ಆರ್.ಪುರ ಹೋಬಳಿ ಮತ್ತು ಬಿದರಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ಪ್ರೆಸ್ಟೀಜ್‌ಗ್ರೂಪ್‌ನವರು ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಇವರ ವಿರುದ್ಧ ಸುಮಾರು ಐದಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ಸಂಘಟನೆಯ ಅಧ್ಯಕ್ಷ ಎಂ.ಅಣ್ಣಯ್ಯ ತಿಳಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಪ್ರೆಸ್ಟೀಜ್ ಗ್ರೂಪ್‌ನವರಿಗೆ ಮತ್ತು ಚೈತನ್ಯ ಸಮರ್ಪಣಾ ಸ್ಮರಣ ಅಂಡ್ ಪ್ರಾಜೆಕ್ಟ್ ಎಂಬ ಬಿಲ್ಡರ್‌ಗಳಿಗೆ ಸರಕಾರಿ ಜಾಗಗಳು ಒತ್ತುವರಿ ಮಾಡಿಕೊಳ್ಳಲು ತಹಶೀಲ್ದಾರ್, ಕಂದಾಯ ನಿರೀಕ್ಷಕರು, ತಾಲೂಕು ಸರ್ವೇಯರ್‌ಗಳು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವೈಟ್‌ಫೀಲ್ಡ್ ಗ್ರಾಮದ ಸರ್ವೆ ನಂ.2/1 ಸಿ ಮತ್ತು 2/1 ಡಿರಲ್ಲಿ 1 ಎಕರೆ 20 ಗುಂಟೆ ಹಾಗೂ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ.42 ಹಾಗೂ ಸರ್ವೆ ನಂ.154 ಮತ್ತು ನಾಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಹಗದೂರು, ಮಾರತ್ತಹಳ್ಳಿ, ಸಾದರಮಂಗಲ, ಬೊಮ್ಮನಹಳ್ಳಿ ಮತ್ತು ದೇವನಹಳ್ಳಿ ತಾಲೂಕಿನಲ್ಲಿ ನಂದಿಬೆಟ್ಟದ ಹತ್ತಿರ ಸರಿ ಸುಮಾರು 8 ಎಕರೆ ಸರಕಾರಿ ಗೋಮಾಳ ಮತ್ತು ಬಿ-ಖರಾಬು ಜಮೀನು ಹಾಗೂ ಕೆರೆ ಜಾಗ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಸರಕಾರಕ್ಕೆ ಸಾವಿರಾರು ಕೋಟಿ ರೂ.ಗಳ ವಂಚನೆ ಮಾಡಿದ್ದಾರೆ ಎಂದು ಅವರು ದೂರಿದರು.
ಅಲ್ಲದೆ, ಅರಣ್ಯ ಇಲಾಖೆಗೆ ಸೇರಿದ 25 ಎಕರೆ ಜಮೀನನ್ನು ಪ್ರೆಸ್ಟೀಜ್ ಗ್ರೂಪ್‌ನವರು ಒತ್ತುವರಿ ಮಾಡಿಕೊಂಡು ವಿಲ್ಲಾಗಳನ್ನು ನಿರ್ಮಿಸುತ್ತಿದ್ದಾರೆ. ಸರ್ವೆ ನಂ.155, 153, 161, 162, 146, 156, 143, 144, 145ರಲ್ಲಿ ಸರ್ವೆ ನಂಬರ್‌ಗಳಲ್ಲಿ ಸಂಬಂಧಿಸಿದಂತೆ ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಸುಮಾರು 15 ರಿಂದ 20 ಎಕರೆ ಸರಕಾರಿ ಜಾಗವನ್ನು ಮುಟ್ಟುಗೋಲು ಹಾಕಿಕೊಂಡಿದ್ದರೂ ಸಹ ಮತ್ತೆ ಇದೇ ಸ್ವತ್ತಿನಲ್ಲಿ ಅಕ್ರಮವಾಗಿ ವಿಲ್ಲಾಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅಣ್ಣಯ್ಯ ಆರೋಪಿಸಿದರು.
ಸರಕಾರಿ ಜಾಗಗಳ ಸಂರಕ್ಷಣೆಗಾಗಿ ನಾವು ನಡೆಸುತ್ತಿರುವ ಹೋರಾಟಕ್ಕೆ ಸರಕಾರದ ಸ್ಪಂದನೆ ಸಿಗುತ್ತಿಲ್ಲ. ಆದುದರಿಂದ, ಅನಿವಾರ್ಯವಾಗಿ ಇಂದು ವಿಧಾನಸೌಧದ ಎದುರು ಮಲ ಮೂರ್ತ ಸುರಿದುಕೊಂಡು ಧರಣಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಸರ್ವೇಯರ್ ಸೇರಿದಂತೆ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ಮರಳಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅಣ್ಣಯ್ಯ ಆಗ್ರಹಿಸಿದರು.