ಅಗತ್ಯವಿದ್ದರೆ ವಿಶೇಷ ಅಧಿವೇಶನ ಕರೆಯಲು ಸಿದ್ಧ: ಸಚಿವ ರಮೇಶ್ ಕುಮಾರ್
ಬೆಂಗಳೂರು, ಜು. 6: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಸಂಬಂಧದ (ತಿದ್ದುಪಡಿ) ವಿಧೇಯಕ ಅಂಗೀಕಾರಕ್ಕೆ ಅಗತ್ಯವಿದ್ದರೆ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017ರ ಅಧ್ಯಯನಕ್ಕೆ ರಚಿಸಿರುವ ವಿಧಾನ ಮಂಡಲ ಜಂಟಿ ಸಲಹಾ ಸಮಿತಿ ಮೊದಲ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಹಿತದೃಷ್ಟಿಯಿಂದ ವಿಧೇಯಕ ಮಂಡಿಸಲಾಗಿದೆ ಎಂದರು.ವಿಧೇಯಕ ಕುರಿತು ಪರಿಶೀಲಿಸಲು ಜಂಟಿ ಸಲಹಾ ಸಮಿತಿ ರಚಿಸಲಾಗಿದೆ. ಸಮಿತಿ ಮೊದಲ ಸಭೆ ನಡೆದಿದ್ದು, ಚರ್ಚಿಸಲಾಗುತ್ತಿದೆ. ಅನಂತರ ವಿಶೇಷ ಅಧಿವೇಶನ ಕರೆಯುವ ಪರಿಸ್ಥಿತಿ ಇದ್ದರೆ ರಾಜ್ಯ ಸರಕಾರ ಅದಕ್ಕೂ ಸಿದ್ಧವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ನೈರ್ಮಲ್ಯ ಕಾಪಾಡಲು ಸೂಚನೆ: ರಾಜ್ಯದಲ್ಲಿ ಮಳೆ ಬೀಳುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂಗ್, ಮಲೇರಿಯಾ, ಚಿಕನ್ ಗುನ್ಯ ಸೇರಿದಂತೆ ಸಾಂಕ್ರಾಮಿಕ ರೋಗಳು ಹರಡುವ ಭೀತಿ ಹಿನ್ನೆಲೆಯಲ್ಲಿ ಗ್ರಾ.ಪಂ., ಪುರಸಭೆ, ನಗರ ಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನೈರ್ಮಲ್ಯ ಕಾಪಾಡಲು ಸೂಚಿಸಲಾಗಿದೆ ಎಂದರು.
ಡೆಂಗ್, ಚಿಕನ್ ಗುನ್ಯ ಚಿಕಿತ್ಸೆಗೆ ಎಲ್ಲ ಸರಕಾರಿ ಆಸ್ಪತ್ರೆಗಳ ನಿರ್ದೇಶನ ನೀಡಿದ್ದು, ಔಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಡೆಂಗ್ ಪ್ರಕರಣಗಳಿಗೆ ಅಗತ್ಯ ಪ್ಲೇಟ್‌ಲೆಟ್ಸ್ ಒದಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರಮೇಶ್‌ಕುಮಾರ್ ಸ್ಪಷ್ಟಪಡಿಸಿದರು.
ಜ್ವರಕ್ಕೆ ಆತಂಕ ಬೇಡ: ಜ್ವರ ಬಂದ ಕೂಡಲೇ ಡೆಂಗ್, ಚಿಕನ್‌ಗುನ್ಯ, ಮಲೇರಿಯಾ ಎಂದು ಜನ ಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ ಅವರು, ಕೆಲ ಖಾಸಗಿ ಆಸ್ಪತ್ರೆಗಳು ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಇಂತಹ ಭಯ ಹುಟ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಬಗ್ಗೆ ತಮಗೆ ಮಾಹಿತಿ ಇರುತ್ತದೆ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಸೇರ್ಪಡೆಯಾಗುವ ಹಿನ್ನೆಲೆಯಲ್ಲಿ ಡೆಂಗ್ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂಕಿ-ಅಂಶ ನೀಡುವೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.