×
Ad

ದಲಿತ, ರೈತ, ಅಲ್ಪಸಂಖ್ಯಾತರ ಬಲಪಡಿಸಲು ತಿಂಗಳಿಗೊಂದು ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

Update: 2017-07-06 18:14 IST

ಬೆಂಗಳೂರು, ಜು.6: ರೈತರ ಹಾಗೂ ಅಲ್ಪಸಂಖ್ಯಾತರ, ಹಿಂದುಳಿದ, ದಲಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳಿಗೊಂದು ಬೃಹತ್ ಸಮಾವೇಶ ನಡೆಸಲಾಗುವುದೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮತ್ತು ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರು ಕೃಷಿಯನ್ನೆ ನಂಬಿದ್ದಾರೆ. ಹೀಗಾಗಿ, ಬಿಜಾಪುರ ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಬೃಹತ್ ರೈತ ಸಮಾವೇಶ ಮಾಡಲಾಗುವುದು. ಅದೇ ರೀತಿ, ರಾಯಚೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ, ಮೈಸೂರಿನಲ್ಲಿ ಹಿಂದುಳಿದ, ತುಮಕೂರಿನಲ್ಲಿ ದಲಿತರ, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ನಡೆಸಲಾಗುವುದೆಂದರು.

ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ಹಾವೇರಿ, ಹುಬ್ಬಳ್ಳಿಯಲ್ಲಿ ಯುವ ಸಮಾವೇಶ ನಡೆಯಲಿದ್ದು, ಇಂದಿನಿಂದ(ಜು.7) ಯಾದಗಿರಿ ಜಿಲ್ಲೆಯಿಂದ ಯುವ ಜನತೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಈಗಾಗಲೇ ಜಿಲ್ಲಾ-ತಾಲೂಕು ಘಟಕಗಳನ್ನು ರಚನೆ ಮಾಡಲಾಗಿದ್ದು, ರಾಜ್ಯ ಘಟಕದ ಪದಾಧಿಕಾರಿಗಳ ನೇಮಕಾತಿ ಪಟ್ಟಿ ನೀಡಿದ್ದಾರೆ. ವಿಭಾಗೀವಾರು, ಜಾತಿವಾರು ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ನೇಮಕತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದೆಂದು ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎಚ್.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಶಾಸಕ ಮಧುಬಂಗಾರಪ್ಪ, ಬಿ.ಬಿ.ನಿಂಗಯ್ಯ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News