ಅಜಯ್ ಸಿಂಗ್ ಸ್ಪೈಸ್ ಜೆಟ್ ಖರೀದಿಸಲು ನೀಡಿದ ಮೊತ್ತ ಕೋಟಿ, ಲಕ್ಷ, ಸಾವಿರಗಳಲ್ಲ!, ಬದಲಾಗಿ...

Update: 2017-07-07 08:12 GMT

ಹೊಸದಿಲ್ಲಿ, ಜು.7: ಎರಡು ವರ್ಷಗಳ ಹಿಂದೆ ಬಿಜೆಪಿ ನಾಯಕ ಹಾಗೂ ‘ಅಬ್ ಕಿ ಬಾರ್ ಮೋದಿ ಸರಕಾರ್’ ಎಂಬ ಘೋಷವಾಕ್ಯದ ಕಾರಣೀಕರ್ತ ಅಜಯ್ ಸಿಂಗ್ ಅವರು ವಿಪರೀತ ಸಾಲಕ್ಕೆ ಸಿಲುಕಿದ್ದಾಗ ಲೋ ಕಾಸ್ಟ್ ಏರ್ ಲೈನ್ ಸ್ಪೈಸ್ ಜೆಟ್ ಅನ್ನು ಕಲಾನಿಧಿ ಮಾರನ್ ಅವರಿಂದ ಕೇವಲ 2 ರೂ.ಗೆ ಖರೀದಿಸಿದ್ದರೆಂಬ ಅಂಶ ಬಯಲಾಗಿದೆ. 

ಸಿಂಗ್-ಮಾರನ್ ಕಲಹಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿಲ್ಲಿ ಹೈಕೋರ್ಟ್ ಆದೇಶವೊಂದರಿಂದ ತಿಳಿದು ಬಂದಂತೆ ಇಬ್ಬರ ನಡುವೆ ಜನವರಿ 2015ರಂದು ಮಾರಾಟ ಖರೀದಿ ಒಪ್ಪಂದವೊಂದಕ್ಕೆ ಬರಲಾಗಿದ್ದು, ಈ ಸಂದರ್ಭ ಸ್ಪೈಸ್ ಜೆಟ್ ನ 35 ಕೋಟಿ ರೂ.ಗೂ ಅಧಿಕ ಶೇರುಗಳನ್ನು ಸಿಂಗ್ ತಮ್ಮದಾಗಿಸಿಕೊಂಡಿದ್ದರು. ಈ ಶೇರುಗಳು ಕಂಪೆನಿಯ ಒಟ್ಟು ಪಾಲಿನಲ್ಲಿ ಶೇ 58.5ರಷ್ಟಿತ್ತು.

ತೀವ್ರ ಆರ್ಥಿಕ ಸಮಸ್ಯೆಗೆ ತುತ್ತಾಗಿ ಡಿಸೆಂಬರ್ 2014ರಲ್ಲಿ ಸ್ಪೈಸ್ ಜೆಟ್ ಮುಚ್ಚುವ ಹಂತಕ್ಕೆ ಬಂದಿದ್ದಾಗ ಅಜಯ್ ಸಿಂಗ್ ಅದನ್ನು ಮಾರನ್ ಅವರಿಂದ ಮರು ಸ್ವಾಧೀನಪಡಿಸಿಕೊಂಡಿದ್ದರು. 2014-15ನೆ ಅವಧಿಯಲ್ಲಿ 687 ಕೋಟಿ  ರೂ. ನಷ್ಟವನ್ನು ಸ್ಪೈಸ್ ಜೆಟ್ ಅನುಭವಿಸಿದ್ದರೆ, ಅದನ್ನು ಅಜಯ್ ಸಿಂಗ್ ಒಪ್ಪಂದದ ಮೂಲಕ ತಮ್ಮ ಒಡೆತನಕ್ಕೆ ಪಡೆದುಕೊಂಡಾಗ 1,418 ಕೋಟಿ ರೂ. ಸಾಲದಲ್ಲಿತ್ತು. ಸ್ಪೈಸ್ ಜೆಟ್ ನ ಒಟ್ಟು ಬಾಕಿ ಆಗ 2,000 ಕೋಟಿ ರೂ. ಮಿಗಿಲಾಗಿತ್ತು. ನಂತರ ಸ್ಪೈಸ್ ಜೆಟ್ ದಿಕ್ಕನ್ನೇ ಬದಲಾಯಿಸಿದ ಕೀರ್ತಿ ಅಜಯ್ ಸಿಂಗ್ ಅವರಿಗೆ ಸಲ್ಲುತ್ತದೆ.

ಆದರೆ ಮಾರನ್ ಅವರಿಂದ ರೂ 2ಕ್ಕೆ ಸಿಂಗ್ ಸ್ಪೈಸ್ ಜೆಟ್ ಖರೀದಿಸಿದ್ದರು ಎಂಬ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕಂಪೆನಿಯ ಅಧಿಕಾರಿಯೊಬ್ಬರು ಅದನ್ನು ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ. ಸ್ಪೈಸ್ ಜೆಟ್ ನ ಎಲ್ಲಾ ಸಾಲಗಳ ಜವಾಬ್ದಾರಿಯನ್ನೂ ವಹಿಸಿಕೊಳ್ಳುವ ಭರವಸೆ ನೀಡಿದ್ದರಿಂದ ಮಾರನ್ ಕುಟುಂಬ ಕಂಪೆನಿಯನ್ನು ಮಾರಾಟ ಮಾಡಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News