ಭಾರತದ ದುರುದ್ದೇಶ ಸಿಕ್ಕಿಂ ಬಿಕ್ಕಟ್ಟಿಗೆ ಕಾರಣ : ಚೀನಾ

Update: 2017-07-07 13:11 GMT

ಬೀಜಿಂಗ್, ಜು.7: ಡೋಕ್ಲಮ್ ಅಥವಾ ಡೊಂಗ್ಲಾಂಗ್ ಪ್ರದೇಶವನ್ನು ಸಂಪೂರ್ಣವಾಗಿ ಕಬಳಿಸುವ ಭಾರತದ ದುರುದ್ದೇಶವೇ ಸಿಕ್ಕಿಂ ಬಿಕ್ಕಟ್ಟಿಗೆ ಕಾರಣ ಎಂದು ಚೀನಾ ಆರೋಪಿಸಿದೆ.

   ಬ್ರಿಟಿಷ್ ಯುಗದಲ್ಲಿ ಈ ಪ್ರದೇಶದಲ್ಲಿ ರಾಷ್ಟ್ರೀಯ ಗಡಿ ಗುರುತಿನ ಬಗ್ಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಸಮ್ಮತಿಸಿದ್ದ ತನ್ನ ನಿಲುವಿಗೆ ಈಗ ಭಾರತ ವಿರುದ್ಧವಾಗಿ ನಡೆದುಕೊಂಡಿದೆ . ತ್ರಿರಾಷ್ಟ್ರ ಗಡಿ ಸಂಧಿಸುವ ಸ್ಥಳ ಎಂದು ಚೀನಾ ಹೇಳುತ್ತಿರುವ ಸ್ಥಳದಿಂದ 2,000 ಮೀಟರ್ ಒಳಗೆ ಭಾರತದ ಪಡೆಗಳು ಗಡಿದಾಟಿ ಬಂದಿವೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಜೆಂಗ್ ಶುವಾಂಗ್ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತ್ರಿರಾಷ್ಟ್ರ ಗಡಿ ಸಂಧಿ ಸ್ಥಳ ಎಂದು ಕರೆಯಲಾಗುವ ಸ್ಥಳವು ಯಾವುದೇ ಪ್ರದೇಶ ಅಥವಾ ರೇಖೆಗೆ ಸಂಬಂಧಿಸಿದ್ದಲ್ಲ, ಇದೊಂದು ಬಿಂದು ಅಥವಾ ಖಚಿತವಾದ ಸ್ಥಳವಾಗಿದೆ.

1890ರಲ್ಲಿ ಬ್ರಿಟನ್ ಮತ್ತು ಚೀನಾ ನಡುವೆ ಟಿಬೆಟ್ ಮತ್ತು ಸಿಕ್ಕಿಂಗೆ ಸಂಬಂಧಿಸಿ ಮಾಡಿಕೊಳ್ಳಲಾದ ಒಪ್ಪಂದ ಪ್ರಕಾರ ಈ ಸ್ಥಳವು ಪೂರ್ವದಲ್ಲಿ ಗಿಮೊಚಿ ಪರ್ವತದಿಂದ ಆರಂಭವಾಗಿ ನೇಪಾಳದವರೆಗೆ ಸಾಗುತ್ತದೆ . ಭಾರತ ನಡೆಸಿರುವ ‘ಅಕ್ರಮ ಗಡಿ ಉಲ್ಲಂಘನೆ ’ ಗಿಮೊಚಿ ಪರ್ವತಕ್ಕಿಂತ 2,000 ಮೀಟರ್ ಒಳಭಾಗದಲ್ಲಿ ನಡೆದಿದ್ದು, ತ್ರಿರಾಷ್ಟ್ರ ಗಡಿ ಸಂಧಿ ಸ್ಥಳಕ್ಕೂ ಈ ಘಟನೆಗೂ ಸಂಬಂಧವೇ ಇಲ್ಲ ಎಂದವರು ಹೇಳಿದರು.

  ಗಡಿ ಗುರುತಿನ ಒಪ್ಪಂದವನ್ನು ಕಡೆಗಣಿಸುವ ಕ್ರಮವಾಗಿ ಭಾರತವು ಸಂಪೂರ್ಣ ಡೋಕ್ಲಮ್ ಪ್ರದೇಶವು ತ್ರಿರಾಷ್ಟ್ರ ಗಡಿ ಸಂಧಿ ಸ್ಥಳದ ಭಾಗವೆಂದು ಹೇಳುತ್ತಿದೆ. ತ್ರಿರಾಷ್ಟ್ರ ಗಡಿ ಸಂಧಿ ಸ್ಥಳವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಾ , ಬಿಂದುವನ್ನು ಪ್ರದೇಶ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಜೆಂಗ್ ಶುವಾಂಗ್ ಆರೋಪಿಸಿದರು.

   ಟಿಬೆಟ್ ಮತ್ತು ಸಿಕ್ಕಿಂ ನಡುವಿನ ಗಡಿ ಭಾಗದ ಕುರಿತು ಮಾಡಿಕೊಳ್ಳಲಾದ 1890ರ ಒಪ್ಪಂದವನ್ನು ಭಾರತ ಸರಕಾರ ಆಗಿಂದಾಗ್ಗೆ ಮಾನ್ಯಮಾಡುತ್ತಾ ಬಂದಿದೆ. ಭಾರತ ಸರಕಾರ ಈ ಹಿಂದೆಯೇ ಗಡಿ ಗುರುತನ್ನು ಮಾನ್ಯ ಮಾಡಿರುವ ಕಾರಣ 1962ರ ಯುದ್ದಕ್ಕೂ ಇದಕ್ಕೂ ಸಂಬಂಧವಿಲ್ಲ. ಗಡಿ ವಿಷಯದಲ್ಲಿ ‘ ಸಮಯ ಕಳೆದಂತೆ ಅಥವಾ ಸರಕಾರ ಬದಲಾದಂತೆ’ ಎಂಬ ಮಾತಿಗೆ ಅರ್ಥವಿಲ್ಲ ಎಂದು ಅವರು ನುಡಿದರು.
ತ್ರಿರಾಷ್ಟ್ರ ಗಡಿ ಸಂಧಿಸ್ಥಳದ ಬಗ್ಗೆ ವಿಶೇಷ ಪ್ರತಿನಿಧಿಗಳು ಮಾಡಿಕೊಂಡ ಕರಾರನ್ನು ಚೀನಾ ಉಲ್ಲಂಘಿಸಿದೆ ಎಂಬ ಭಾರತದ ವಿದೇಶ ವ್ಯವಹಾರ ಸಚಿವಾಲಯದ ಹೇಳಿಕೆಯನ್ನು ತಳ್ಳಿ ಹಾಕಿದ ಜೆಂಗ್, ಇಲ್ಲಿ ಯಾವುದೇ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಬಿಂದುವನ್ನು ಪ್ರದೇಶದೊಂದಿಗೆ ಸಮೀಕರಿಸುವ ಹೊಸ ಪರಿಕಲ್ಪನೆಯನ್ನು ಭಾರತ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News