ವಿಂಬಲ್ಡನ್: ಫೆಡರರ್, ಡೊಮಿನಿಕ್ ಮೂರನೆ ಸುತ್ತಿಗೆ ಲಗ್ಗೆ

Update: 2017-07-07 17:52 GMT

ಲಂಡನ್, ಜು.7: ಹಿರಿಯ ಆಟಗಾರ ರೋಜರ್ ಫೆಡರರ್, ಆಸ್ಟ್ರೀಯದ ಆಟಗಾರ ಡೊಮಿನಿಕ್ ಥೀಮ್ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ 35ರ ಹರೆಯದ ಸ್ವಿಸ್ ಆಟಗಾರ ಫೆಡರರ್ 79ನೆ ರ್ಯಾಂಕಿನ ಸರ್ಬಿಯದ ಡುಸಾನ್ ಲಾಜೊವಿಕ್‌ರನ್ನು 7-6(0), 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಈ ಮೂಲಕ ಫೆಡರರ್ ವಿಂಬಲ್ಡನ್ ಟೂರ್ನಿಯಲ್ಲಿ 86ನೆ ಗೆಲುವು ದಾಖಲಿಸಿದ್ದಾರೆ. 2003ರಲ್ಲಿ ಮೊದಲ ಬಾರಿ ವಿಂಬಲ್ಡನ್ ಟ್ರೋಫಿ ಜಯಿಸಿದ್ದ ಫೆಡರರ್ ಇದೀಗ 8ನೆ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಆರಂಭಿಕ ಸೆಟ್ ಸೋಲಿನಿಂದ ಹೊರ ಬಂದಿರುವ 8ನೆ ಶ್ರೇಯಾಂಕದ ಆಟಗಾರ ಡೊಮಿನಿಕ್ ಫ್ರೆಂಚ್‌ನ ಗಿಲ್ಲೆಸ್ ಸಿಮೊನ್ ವಿರುದ್ಧ 5-7, 6-4, 6-2, 6-4 ಸೆಟ್‌ಗಳ ಅಂತರದಿಂದ ಜಯಭೇರಿ ಬಾರಿಸಿದರು. ಈ ಗೆಲುವಿನೊಂದಿಗೆ ಮೊದಲ ಬಾರಿ ಮೂರನೆ ಸುತ್ತು ತಲುಪಿದ್ದಾರೆ.

23ರಹರೆಯದ ಡೊಮಿನಿಕ್ ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್‌ನಲ್ಲಿ ಸತತ ಎರಡನೆ ಬಾರಿ ಸೆಮಿ ಫೈನಲ್‌ಗೆ ತಲುಪಿದ್ದರು. ಆ ಟೂರ್ನಿಯ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಮಣಿಸಿ ಶಾಕ್ ನೀಡಿದ್ದರು.

ಡೊಮಿನಿಕ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಡೊನಾಲ್ಡ್‌ಸನ್ ಅಥವಾ ಇಟಲಿಯ ಪಾಯೊಲೊ ಲೊರೆಂಝಿ ಅವರನ್ನು ಎದುರಿಸಲಿದ್ದಾರೆ.

ಕೆರ್ಬರ್ ತೃತೀಯ ಸುತ್ತಿಗೆ ಲಗ್ಗೆ

ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಮಹಿಳೆಯರ ಗಲ್ಸ್‌ನಲ್ಲಿ ಮೂರನೆ ಸುತ್ತು ತಲುಪಿದ್ದಾರೆ.

ಇಲ್ಲಿ ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಕೆರ್ಬರ್ ಅವರು ಕರ್ಸ್ಟನ್ ಫ್ಲಿಪ್ಕೆನ್ಸ್‌ರನ್ನು 7-5, 7-5 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಕಳೆದ ವರ್ಷ ವಿಂಬಲ್ಡನ್ ಫೈನಲ್‌ಗೆ ತಲುಪಿದ್ದ ಕೆರ್ಬರ್ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತು ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.

ಕಳೆದ ವರ್ಷ ಆಸ್ಟ್ರೇಲಿಯನ್ ಹಾಗೂ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಕೆರ್ಬರ್ 2017ರಲ್ಲಿ ಕಳೆದ 2 ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಕಳೆದ ತಿಂಗಳು ನಡೆದಿದ್ದ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ಎಕಟೆರಿನಾ ಮಕರೋವಾ ವಿರುದ್ಧ ಸೋಲುವ ಮೂಲಕ ಮುಜುಗರಕ್ಕೀಡಾಗಿದ್ದರು.

ಕಳೆದೆರಡು ದಿನಗಳಲ್ಲಿ ಕರೋಲಿನಾ ಪ್ಲಿಸ್ಕೋವಾ ಹಾಗೂ ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಟೂರ್ನಿಯಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ 29ರ ಹರೆಯದ ಕೆರ್ಬರ್‌ಗೆ ವಿಂಬಲ್ಡನ್ ಪ್ರಶಸ್ತಿ ಎತ್ತುವ ಅವಕಾಶ ಹೆಚ್ಚಾಗಿದೆ.

ಕೆರ್ಬರ್ ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಸುತ್ತಿನಲ್ಲಿ ಲೂಸಿ ಸಫರೋವಾ ಅಥವಾ ಶೆಲ್ಬಿ ರೋಜರ್ಸ್‌ರನ್ನು ಎದುರಿಸಲಿದ್ದಾರೆ.

 ವೋಝ್ನಿಯಾಕಿಗೆ ಜಯ: ಬಲ್ಗೇರಿಯದ ಸ್ವೆಟಾನಾ ಪಿರೊಂಕೊವಾರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿದ ಡೆನ್ಮಾರ್ಕ್‌ನ ಕರೊಲಿನ್ ವೋಝ್ನಿಯಾಕಿ ವಿಂಬಲ್ಡನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೆ ಸುತ್ತು ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ವೋಝ್ನಿಯಾಕಿ ಮುಂದಿನ ಸುತ್ತಿನಲ್ಲಿ 38ನೆ ರ್ಯಾಂಕಿನ ಅನೆಟ್ಟ್ ಕಾಂಟ್ರೆವೆಟ್‌ರನ್ನು ಎದುರಿಸಲಿದ್ದಾರೆ.

ಪ್ರಶಸ್ತಿ ಫೇವರಿಟ್ ಪ್ಲಿಸ್ಕೋವಾಗೆ ಶಾಕ್: ವಿಂಬಲ್ಡನ್ ಪ್ರಶಸ್ತಿ ಫೇವರಿಟ್ ಆಗಿದ್ದ ಕರೊಲಿನ್ ಪ್ಲಿಸ್ಕೋವಾ ಟೂರ್ನಿಯ ಎರಡನೆ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ.

ಗುರುವಾರ ಸೆಂಟರ್‌ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ಲಿಸ್ಕೋವಾ ಅವರು ವಿಶ್ವದ ನಂ.108ನೆ ಆಟಗಾರ್ತಿ ಮ್ಯಾಗ್ಡಲೆನಾ ರಿಬಾರಿಕೊವಾ ವಿರುದ್ಧ 3-6, 7-5, 6-2 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಕಳೆದ ತಿಂಗಳು ನಡೆದಿದ್ದ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಝೆಕ್ ಆಟಗಾರ್ತಿ ಪ್ಲಿಸ್ಕೋವಾ ವಿಂಬಲ್ಡನ್‌ನಲ್ಲಿ ಕಳಪೆ ದಾಖಲೆ ಹೊಂದಿದ್ದಾರೆ. ಸತತ ಆರನೆ ವರ್ಷವೂ ಎರಡನೆ ಸುತ್ತು ದಾಟಲು ವಿಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News