ಈ ಗ್ಯಾಂಗ್ 50 ಕೋ.ರೂ.ಗಳ ನಕಲಿ ನಾಣ್ಯಗಳನ್ನು ಚಲಾವಣೆ ಮಾಡಿದ್ದು ಹೇಗೆ......?

Update: 2017-07-08 10:03 GMT

ಹೊಸದಿಲ್ಲಿ, ಜು. 7: ನಮ್ಮ ದೇಶದಲ್ಲಿ ನಕಲಿ ನೋಟುಗಳು ಮಾತ್ರವಲ್ಲ, ನಕಲಿ ನಾಣ್ಯಗಳೂ ಧಾರಾಳವಾಗಿ ಹರಿದಾಡುತ್ತಿವೆ. ನೋಟುಗಳು ನಕಲಿಯಾಗಿರಬಹುದೇ ಎಂಬ ಶಂಕೆ ಮಾತ್ರ ಜನರಲ್ಲಿ ರುತ್ತದೆಯೇ ಹೊರತು ನಾಣ್ಯಗಳ ಅಸಲಿಯತ್ತಿನ ಬಗ್ಗೆ ತಲೆ ಕೆಡಿಸಿಕೊಳ್ಳುವವರು ತುಂಬ ಕಡಿಮೆ. ಹೀಗಾಗಿ ನಕಲಿ ನಾಣ್ಯಗಳು ಸುಲಭವಾಗಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ದಾಟುತ್ತವೆ.

ಇಲ್ಲಿದ್ದಾರೆ ಲುಥ್ರಾ ಬ್ರದರ್ಸ್

ನಕಲಿ ನಾಣ್ಯಗಳ ಚಲಾವಣೆಯಲ್ಲಿ ಉಪಕಾರ್ ಮತ್ತು ಸ್ವೀಕಾರ್ ಲುಥ್ರಾ ಕುಖ್ಯಾತ ಹೆಸರುಗಳಾಗಿವೆ. ಈ ಸೋದರರನ್ನು ಪೊಲೀಸರು ಹಲವಾರು ಬಾರಿ ಬಂಧಿಸಿದ್ದಾರೆ, ಅವರು ಬಿಡುಗಡೆಗೊಂಡಿದ್ದಾರೆ, ಮತ್ತೆ ಬಂಧಿಸಲ್ಪಟ್ಟಿದ್ದಾರೆ. ಆದರೂ ಅವರು ದಂಧೆ ಯನ್ನು ನಿಲ್ಲಿಸಿಲ್ಲ.
ಉತ್ತರ ಭಾರತದಾದ್ಯಂತ ಕಾರ್ಯಾಚರಿಸುತ್ತಿರುವ ಲುಥ್ರಾ ಗ್ಯಾಂಗ್ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 50 ಕೋ.ರೂ.ಗಳ ಮುಖಬೆಲೆಯ ನಕಲಿ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ಬಿಟ್ಟಿದೆ.

ಪಕ್ಕಾ ಕ್ರಿಮಿನಲ್‌ಗಳು

2016,ಅಕ್ಟೋಬರ್‌ನಲ್ಲಿ ಲುಥ್ರಾ ಗ್ಯಾಂಗ್‌ಗೆ ಸೇರಿದ ನಕಲಿ ನಾಣ್ಯ ತಯಾರಿಕಾ ಘಟಕಗಳಿಗೆ ದಾಳಿ ನಡೆಸಿದ್ದ ಪೊಲೀಸರು ಗುಲ್ಶನ್ ಗಂಭೀರ್ ಮತ್ತು ಸಚಿನ್ ಎನ್ನುವವರನ್ನು ಬಂಧಿಸಿ 5 ಮತ್ತು 6 ರೂ.ಗಳ ಆರು ಲಕ್ಷ ರೂ.ಗೂ ಅಧಿಕ ವೌಲ್ಯದ ನಕಲಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಉಪಕಾರ್ ಮತ್ತು ಸ್ವೀಕಾರ್ ಮಾತ್ರ ಸಿಕ್ಕಿರಲಿಲ್ಲ. ಬಳಿಕ ರಮೇಶ ವರ್ಮಾ ಎಂಬಾತನನ್ನು ತಮ್ಮ ದಂಧೆಯಲ್ಲಿ ಪಾಲುದಾರನನ್ನಾಗಿ ಸೇರಿಸಿಕೊಂಡ ಲುಥ್ರಾ ಸೋದರರು ಪಶ್ಚಿಮ ದಿಲ್ಲಿಯ ಉತ್ತಮ ನಗರದಲ್ಲಿ ಘಟಕವನ್ನು ಸ್ಥಾಪಿಸಿದ್ದರು. ಆದರೆ ಬಹುಬೇಗನೇ ಈ ವರ್ಮಾ ಲುಥ್ರಾಗಳಿಗೆ ಬೆದರಿಕೆಯಾಗಿ ಪರಿಣಮಿಸಿದ್ದ. ಆಗ ಉಪಕಾರ್ ಲುಥ್ರಾ ಸುಪಾರಿ ಹಂತಕರ ಮೂಲಕ ವರ್ಮಾನ ಕಥೆಯನ್ನು ಮುಗಿಸಿಬಿಟ್ಟಿದ್ದ.

ಕಾರ್ಯಾಚರಣೆ ಹೇಗೆ ?

ಹೈಡ್ರಾಲಿಕ್ ಮಷಿನ್, ಗ್ರೈಂಡಿಂಗ್ ಮಷಿನ್, ಲೇಥ್ ಮತ್ತು ಸರ್ಫೇಸ್ ಗ್ರೈಂಡರ್‌ನಂತಹ ಹಲವಾರು ಯಂತ್ರಗಳನ್ನು ಖರೀದಿಸಿದ್ದ ಗ್ಯಾಂಗ್ ಜೆಜೆ ಕ್ಲಸ್ಟರ್‌ನಲ್ಲಿ ಮನೆಯೊಂದನ್ನೇ ತಾತ್ಕಾಲಿಕ ನಕಲಿ ನಾಣ್ಯ ತಯಾರಿಕೆ ಫ್ಯಾಕ್ಟರಿಯನ್ನಾಗಿ ಪರಿವರ್ತಿಸಿ ದ್ದರು.

ಸುಸಂಘಟಿತ ಗ್ಯಾಂಗ್

ಈ ಗ್ಯಾಂಗ್ ಲೋಹದ ತಗಡುಗಳಂತಹ ಕಚ್ಚಾ ವಸ್ತುಗಳನ್ನು ಮಾಯಾಪುರಿ ಮತ್ತು ಟಿಳಕ್ ನಗರಗಳಿಂದ ಖರೀದಿಸುತ್ತಿತ್ತು. ನಕಲಿ ನಾಣ್ಯಗಳ ಅಚ್ಚುಗಳನ್ನು ತಯಾರಿಸುವಲ್ಲಿ ನಿಪುಣನಾಗಿದ್ದ ಉಪಕಾರ್ ಅದನ್ನು ಗ್ಯಾಂಗ್‌ನ ಇತರ ಕೆಲವು ಸದಸ್ಯರಿಗೂ ಕಲಿಸಿದ್ದ.

ತಯಾರಿಕೆ ಹೇಗೆ? ಹಿತ್ತಾಳೆಯ ತಗಡುಗಳಿಂದ ಎರಡು ಹಂತಗಳಲ್ಲಿ ನಾಣ್ಯಗಳನ್ನು ಕೊರೆಯಲಾಗುತ್ತಿತ್ತು. ಮೊದಲು ಹೊರಗಿನ ಗೋಲಾಕಾರವನ್ನು ತೆಗೆದುಕೊಂಡು ಬಳಿಕ ಮಧ್ಯದ ಭಾಗವನ್ನು ಅದರ ಮೇಲೆ ಮುದ್ರಿಸಲಾಗುತ್ತಿತ್ತು. ನಂತರ ಮಧ್ಯದ ಭಾಗಕ್ಕೆ ನಿಕೆಲ್ ಪಾಲಿಷ್ ನೀಡಲಾಗುತ್ತಿತ್ತು. ಅಷ್ಟಾದ ಬಳಿಕ ಹೈಡ್ರಾಲಿಕ್ ಯಂತ್ರವನ್ನು ಬಳಸಿ ಎರಡೂ ಭಾಗಗಳನ್ನು ಜೋಡಿಸಲಾಗುತ್ತಿತ್ತು. ಅವು ನಿಜವಾದ ನಾಣ್ಯಗಳಂತೆ ಕಾಣಲು ಅವುಗಳಿಗೆ ತುಕ್ಕು ನಿರೋಧಕ ಸ್ಪ್ರೇ ಅನ್ನು ಬಳಿಯಲಾಗುತ್ತಿತ್ತು.

ಅಗ್ಗದಲ್ಲಿ ಮುದ್ರಣ

ಲುಥ್ರಾ ಸೋದರರಿಗೆ ಒಂದು 10 ರೂ.ನಾಣ್ಯ ತಯಾರಿಸಲು 4.5 ರೂ ಮತ್ತು 5 ರೂ.ನಾಣ್ಯಕ್ಕೆ 2 ರೂ.ವೆಚ್ಚವಾಗುತ್ತಿತ್ತು. ನಕಲಿ ನಾಣ್ಯಗಳನ್ನು ದಿಲ್ಲಿ,ರಾಜಸ್ಥಾನ ಮತ್ತು ಹರ್ಯಾಣಗಳ ವಿವಿಧೆಡೆಗಳಲ್ಲಿಯ ಟೋಲ್ ಪ್ಲಾಝಾಗಳು, ವಾರದ ಸಂತೆಗಳು ಮತ್ತು ಸಣ್ಣ ಅಂಗಡಿಗಳ ಮೂಲಕ ಚಲಾವಣೆ ಮಾಡಲಾಗುತ್ತಿತ್ತು.

ಇದೀಗ ಲುಥ್ರಾ ಸೋದರರನ್ನು ತಮ್ಮ ಖೆಡ್ಡಾದಲ್ಲಿ ಬೀಳಿಸಿರುವ ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಅವರ ಬಳಿಯಿದ್ದ ಸಾವಿರಾರು ರೂ.ವೌಲ್ಯದ ನಕಲಿ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News