ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನಗಳ ಅತ್ಯಗತ್ಯ: ಆರ್.ವಿ.ದೇಶಪಾಂಡೆ
ಬೆಂಗಳೂರು, ಜು. 8: ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನಗಳ ಉತ್ಪಾದನೆ ಅತ್ಯಗತ್ಯ. ಇದಕ್ಕೆ ಪೂರಕವಾದ ವಾತಾವರಣ ಕರ್ನಾಟಕದಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಡಿಫೆನ್ಸ್ ಅಂಡ್ ಇಂಡಸ್ಟ್ರಿ ಅಂಡ್ ಇನ್ನೋವೇಟರ್ಸ್ ಅಸೋಸಿಯೇಷನ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪೆನಿಗಳ ಪೈಕಿ ಶೇ.65ರಷ್ಟು ಕಂಪೆನಿಗಳು ಇಲ್ಲಿ ಬಂಡವಾಳ ತೊಡಗಿಸುವ ಮೂಲಕ ಕರ್ನಾಟಕ ರಾಜ್ಯವನ್ನು ‘ರಕ್ಷಣೆ ಹಬ್’ ಮಾಡಿವೆ. ಆ ಮೂಲಕ ಮೇಕ್ ಇನ್ ಇಂಡಿಯಾ ಅವಕಾಶ ಸದ್ವಿನಿಯೋಗ ಮಾಡಿಕೊಳ್ಳಲಾಗುತ್ತಿದೆ ಎಂದರು.
ಡಿಐಐಎ ಅಧ್ಯಕ್ಷ ಮತ್ತು ಕೇಲ್ಕರ್ ಸಮಿತಿ ಸದಸ್ಯ ರಾಹುಲ್ ಚೌಧರಿ ಮಾತನಾಡಿ, ‘ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು-ಹೆಚ್ಚು ಸ್ವದೇಶಿತನ ಬರಬೇಕಾಗಿದೆ. ರಕ್ಷಣಾ ಕ್ಷೇತ್ರವೆಂಬುದು ಏಕಸ್ವಾಮ್ಯದ ವ್ಯವಹಾರ. ಅಂದರೆ, ಒಂದು ಖರೀದಿದಾರನ ಮಾರುಕಟ್ಟೆಯಾಗಿದ್ದು, ಸರಕಾರ ಮಾರುಕಟ್ಟೆಯ ಏಕೈಕ ನಿರ್ಣಾಯಕ ಖರೀದಿದಾರ ಸಂಸ್ಥೆಯಾಗಿದೆ ಎಂದರು.
ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬರುತ್ತಿವೆ. ಈ ಕ್ಷೇತ್ರ ಪಾರದರ್ಶಕವಾಗಿ ಮತ್ತಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ. 2017ರ ಜೂನ್‌ನಲ್ಲಿ ಹಣಕಾಸು ಇಲಾಖೆ ಜಿಎಫ್‌ಆರ್‌ನಲ್ಲಿ ಬದಲಾವಣೆ ತರುವ ಮೂಲಕ ರಕ್ಷಣಾ ಇಲಾಖೆಯಲ್ಲಿ ಮೇಕ್ ಇನ್ ಇಂಡಿಯಾ ಉತ್ಪನ್ನಗಳ ಉತ್ಪಾದನೆ ಮತ್ತು ಇವುಗಳಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡುವ ಮೂಲಕ ಈ ಕ್ಷೇತ್ರವನ್ನು ಸುಧಾರಣೆಗೆ ಉತ್ತೇಜನ ನೀಡಲಾಗುತ್ತಿದೆ.
ಈ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ದೇಸೀಯ ಉತ್ಪನ್ನಗಳ ಹೆಚ್ಚು-ಹೆಚ್ಚು ಉತ್ಪಾದನೆಗೆ ಒತ್ತು ಸಿಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕ್ಷೇತ್ರದ ಉತ್ಪನ್ನಗಳನ್ನು ರಫ್ತು ಮಾಡುವ ಬಹುದಿನಗಳ ಕನಸು ನನಸಾಗುವತ್ತ ಸಾಗಿದೆ’ ಎಂದು ಅವರು ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.
ಪದ್ಮಶ್ರೀ ಪುರಸ್ಕೃತ, ಡಿಆರ್‌ಡಿಎಲ್ ಮಾಜಿ ನಿರ್ದೇಶಕ ಡಾ.ಪ್ರಹ್ಲಾದ್ ರಾಮರಾವ್, ಮಿಸೈಲ್ ಕಾರ್ಯಕ್ರಮದ ನಿರ್ದೇಶಕ ಜಿ.ಚಂದ್ರಮೌಳಿ, ಕಮಾಂಡರ್ ಮುಖೇಶ್ ಭಾರ್ಗವ ಮತ್ತು ರಕ್ಷಣಾ ಇಲಾಖೆಯ ಮಾಜಿ ಹಣಕಾಸು ಸಲಹೆಗಾರ ಅಮಿತ್ ಕೌಶಿಶ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.