ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಬದ್ಧ: ಮುಖ್ಯಮಂತ್ರಿ
ಬೆಂಗಳೂರು, ಜು.8: ರಾಜ್ಯದ ನ್ಯಾಯಾಂಗ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ಬೈಯಪ್ಪನಹಳ್ಳಿಯ ಎನ್‌ಜಿಇಎಫ್ ಬಡಾವಣೆಯಲ್ಲಿ ಲೋಕೋಪ ಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ರಾಜ್ಯ ಉಚ್ಚ ನ್ಯಾಯಾಲಯದ ಸಿಬ್ಬಂದಿ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ 333 ನ್ಯಾಯಾಲಯ ಕಟ್ಟಡ ಮತ್ತು ನ್ಯಾಯಾಂಗ ಸಿಬ್ಬಂದಿ ವರ್ಗದವರ 675 ವಸತಿ ಗೃಹ ಸೇರಿದಂತೆ ಈಗಾಗಲೆ ಪೂರ್ಣಗೊಂಡಿರುವ 192 ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸುಮಾರು 1500ಕೋಟಿ ರೂ.ಗಳನ್ನು ಖರ್ಚುಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಸ್ತೆಗಳು, ಸೇತುವೆಗಳು, ಕಟ್ಟಡಗಳನ್ನು ಆದ್ಯತೆಯ ಮೇರೆಗೆ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸಿದ್ದೇವೆ. ಯಾವುದೆ ಸಮಾಜದ ಆರ್ಥಿಕ ಬೆಳವಣಿಗೆಯಾಗಬೇಕಾದರೆ ಮೂಲಭೂತ ಸೌಕರ್ಯ ಅತ್ಯಗತ್ಯ ಎಂಬುದನ್ನು ನಮ್ಮ ಸರಕಾರ ಮನಗಂಡಿದೆ ಎಂದು ಅವರು ತಿಳಿಸಿದರು.
ನ್ಯಾಯಾಂಗ ಇಲಾಖೆಯ ಯೋಜನೆಗಳಿಗೆ ಕೇಂದ್ರ ಸರಕಾರ 1016 ಕೋಟಿ ರೂ.ಗಳ ಪೈಕಿ 463 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದೆ. ನಾವು ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರಕಾರದ ಖಜಾನೆಯಿಂದ ಹಣ ಭರಿಸಿ ನ್ಯಾಯಾಲಯದ ಕಟ್ಟಡಗಳನ್ನು ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
191 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಸತಿ ಸಮುಚ್ಚಯವು ಒಂಭತ್ತು ಅಂತಸ್ತುಗಳನ್ನು ಒಳಗೊಂಡ ಅತಿ ದೊಡ್ಡ ವಸತಿ ಸಮುಚ್ಚಯವಾಗಿದೆ. ಇದರಲ್ಲಿ, ಲಿಫ್ಟ್ ಸೌಲಭ್ಯ, ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೂ ಒಳಗೊಂಡ ಈ ವಸತಿ ಸಮುಚ್ಚಯ ದೇಶಕ್ಕೆ ಪ್ರಥಮ ಎನಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 1500 ಕೋಟಿ ರೂ.ಅಂದಾಜಿನಲ್ಲಿ ವಿವಿಧ ನ್ಯಾಯಾಲಯ ಕಟ್ಟಡಗಳನ್ನು ಸ್ಥಾಪಿಸಲಾಗಿದ್ದು, ನ್ಯಾಯಾಂಗ ವ್ಯವಸ್ಥೆಯ ಮೂಲ ಸೌಕರ್ಯ ಕಲ್ಪಸುವಲ್ಲಿ ರಾಜ್ಯ ಸರಕಾರ ದೇಶದಲ್ಲಿಯೆ ಎರಡನೇ ಸ್ಥಾನದಲ್ಲಿದೆ ಎಂದರು.
ನ್ಯಾಯಾಂಗ ಇಲಾಖೆಯ ಸಿಬ್ಬಂದಿಯ ಈ ವಸತಿ ಸಮುಚ್ಚಯ ನಿರ್ಮಾಣಕ್ಕೆ 2014ರಲ್ಲಿ ಶಂಕುಸ್ಥಾಪನೆ ನೆರವೇರಿಸಿ, 2017ರಲ್ಲಿ ಇದನ್ನು ಪೂರ್ಣಗೊಳಿಸಿ ನಾವೇ ಇಂದು ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ ಎಂದ ಅವರು, ಈ ವಸತಿ ಸಮುಚ್ಚಯದಲ್ಲಿ ನ್ಯಾಯಾಂಗ ಇಲಾಖೆಯ ಬಿ ವರ್ಗ, ಸಿ ವರ್ಗ, ಮತ್ತು ಡಿ ವರ್ಗದ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ಆದ್ಯತೆಯ ಮೇರೆಗೆ ನಿರ್ಮಿಸಲಾಗಿದೆ ಎಂದರು.
ಸುಪ್ರೀಂಕೋರ್ಟ್ ನ್ಯಾ.ಮೋಹನ್ ಎಂ. ಶಾಂತನಗೌಡರ್ ಮಾತನಾಡಿ, ನ್ಯಾಯಾಂಗ ಇಲಾಖೆಯ ಈ ವಸತಿ ಸಮುಚ್ಚಯ ನೀರು, ವಿದ್ಯುತ್, ಮಳೆನೀರು ಕೊಯ್ಲು ಮುಂತಾದ ಸಕಲ ಸೌಕರ್ಯಗಳನ್ನು ಒಳಗೊಂಡಿದ್ದು, ಮೆಟ್ರೋ ನಿಲ್ದಾಣವು ಸಮೀಪದಲ್ಲೆ ಒಳಗೊಂಡಿದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಈ ವಸತಿ ಸಮುಚ್ಚಯದಲ್ಲಿ ವಾಸಿಸುವ ನೌಕರರು ಸಹಬಾಳ್ವೆಯಿಂದ ಜೀವನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸುಪ್ರೀಂಕೋರ್ಟ್ ನ್ಯಾ.ಶೇಕ್ ಅಬ್ದುಲ್ ನಝೀರ್ ಮಾತನಾಡಿ, ನ್ಯಾಯಾಂಗ ಸಿಬ್ಬಂದಿಯ ಈ ವಸತಿ ಸಮುಚ್ಚಯದಲ್ಲಿ ಸಮುದಾಯ ಭವನ ಮತ್ತು ಮಕ್ಕಳ ಆಟದ ಮೈದಾನದ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಈ ಸೌಕರ್ಯವನ್ನು ಒದಗಿಸಿ ಕೊಡುವಂತೆ ಸರಕಾರಕ್ಕೆ ಮನವಿ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ, ಲೋಕೋಪಯೋಗಿ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ನೌಕರರು ಒಟ್ಟಾಗಿ ಸೇರಿ ಈ ವಸತಿ ಸಮುಚ್ಚಯದ ನಿರ್ವಹಣೆಯನ್ನು ಮಾಡಬೇಕು ಮತ್ತು ಕಟ್ಟಡವನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬ ಮಧ್ಯಮ ವರ್ಗದವರ ಕನಸಾಗಿದ್ದು, ನ್ಯಾಯಾಂಗ ಇಲಾಖೆಯ ಸಿಬ್ಬಂದಿಯವರಿಗೆ ಇಷ್ಟು ಅನುಕೂಲತೆಯುಳ್ಳ ವಸತಿ ಸಮುಚ್ಚಯವನ್ನು ನಿರ್ಮಿಸಿಕೊಟ್ಟಿರುವ ರಾಜ್ಯ ಸರಕಾರವನ್ನು ನಿಮ್ಮೆಲ್ಲರ ಪರವಾಗಿ ಶ್ಲಾಘಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ರವಿಮಳಿಮಠ್, ಪಿ.ಎಸ್.ದಿನೇಶ್‌ಕುಮಾರ್, ಜಾನ್‌ಮೈಕಲ್‌ಕುನ್ಹಾ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ, ಕಾರ್ಯದರ್ಶಿ ಎಸ್.ಬಿ.ಸಿದ್ದಗಂಗಪ್ಪಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.