870ಕೋಟಿ ರೂ.ವೆಚ್ಚದಲ್ಲಿ ತ್ಯಾಜ್ಯನೀರು ಶುದ್ಧೀಕರಣ ಘಟಕ: ಕೃಷ್ಣ ಬೈರೇಗೌಡ
ಬೆಂಗಳೂರು, ಜು.8: ಬೆಂಗಳೂರು ನಗರದ ನಿರುಪಯುಕ್ತ ಕೊಳಚೆ ನೀರನ್ನು ಶುದ್ಧೀಕರಿಸಿ ಬಯಲುಸೀಮೆಯ ಗ್ರಾಮೀಣ ಪ್ರದೇಶಗಳ ಕೆರೆಗಳಿಗೆ ನೀರು ತುಂಬಿಸಲು 870ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶನಿವಾರ ದೊಡ್ಡಜಾಲ ಗ್ರಾಪಂ ವ್ಯಾಪ್ತಿಯ ನವರತ್ನ ಅಗ್ರಹಾರದಲ್ಲಿ ಹಮ್ಮಿಕೊಂಡಿದ್ದ 2017-18ನೆ ಸಾಲಿನ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಟರಾಯನಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆಯ ಪ್ರದೇಶಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಮಹತ್ತರವಾದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ನಿರುಪಯುಕ್ತ ಕೊಳಚೆ ನೀರನ್ನು ಸಂಸ್ಕರಿಸಿ ಪೈಪ್‌ಲೈನ್‌ಗಳ ಮೂಲಕ ಕೆರೆಗಳಿಗೆ ಹರಿಸಿ ನೀರಿನ ಬವಣೆಯನ್ನು ನೀಗಿಸಲಾಗುವುದು. ಮುಂದಿನ ಜು.28ರಂದು ದೇವನಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಗ್ರಾಮಸಭೆಗಳು ಕೇವಲ ಕಾಟಾಚಾರದ ಸಭೆಗಳಾಗದೆ, ಅಧಿಕಾರಿಗಳು ತಪ್ಪದೆ ಸಭೆಗಳಿಗೆ ಹಾಜರಾಗಿ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸಿಕೊಟ್ಟು ಜನತೆಯ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಜ್ಯೋತಿ ಕಲ್ಲೇಶ್, ದೊಡ್ಡಜಾಲ ಗ್ರಾಪಂ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಉಪಾಧ್ಯಕ್ಷೆ ನಳಿನಾ, ಸಿಡಿಪಿಒ ಸಿದ್ದರಾಮಣ್ಣ, ಇಒ ಅಶೋಕ್ ರೆಡ್ಡಿ, ಪಿಡಿಒ ಗಂಗಾರಾಮ್ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.