ಜು.12 ರಿಂದ ಕೆಎಸ್‌ಆರ್‌ಪಿಯಿಂದ ಸೈಕಲ್ ಜಾಥ

Update: 2017-07-08 12:56 GMT

ಬೆಂಗಳೂರು, ಜು.8: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ವತಿಯಿಂದ ಜು.12 ರಿಂದ 25 ರವರೆಗೆ ರಾಜ್ಯಾದ್ಯಂತ ಸೈಕಲ್ ಜಾಥ ನಡೆಸುವ ಮೂಲಕ ಕರ್ನಾಟಕ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಜಿಪಿ ಭಾಸ್ಕರ್‌ರಾವ್, ಇಂದಿನ ಸಂಚಾರ ದಟ್ಟಣೆ, ಯಾಂತ್ರಿಕ ವ್ಯವಸ್ಥೆಯಿಂದ ಹಾಗೂ ವಾಹನಗಳಿಂದಾಗುತ್ತಿರುವ ವಾಯುಮಾಲಿನ್ಯ ಹಾಗೂ ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಸೈಕಲ್ ಅನ್ನು ವಾಹನವನ್ನಾಗಿ ಬಳಸುವಂತೆ ಪ್ರಚಾರ ಮಾಡುವುದು ಈ ಜಾಥದ ಉದ್ದೇಶವಾಗಿದೆ ಎಂದು ಹೇಳಿದರು.

ಜು.12 ರಂದು ಬೀದರ್‌ನಿಂದ ಆರಂಭವಾಗುವ ಜಾಥ ರಾಜ್ಯದ 16 ಜಿಲ್ಲೆಗಳ ಸುಮಾರು 1750 ಕಿ.ಮೀ. ಸಂಚಾರ ನಡೆಸಲಿದೆ. ಅನಂತರ ಅಂತಿಮವಾಗಿ ಜು.25 ರಂದು ಜಾಥ ಸಮಾರೋಪಗೊಳ್ಳಲಿದೆ. ಈ ಜಾಥದಲ್ಲಿ ಮೀಸಲು ಪಡೆಯ 60 ಜನ ಪೊಲೀಸರು ವಾಯುಮಾಲಿನ್ಯ ಹಾಗೂ ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಸೈಕಲ್ ಬಳಸುವುದರಿಂದ ಉತ್ತಮವಾದ ಆರೋಗ್ಯ ಸ್ಥಿತಿ ಹೆಚ್ಚಿಸಿಕೊಳ್ಳುವುದರ ಕುರಿತು ಬ್ಯಾನರ್ ಮತ್ತು ಭಿತ್ತಿಪತ್ರಗಳೊಂದಿಗೆ ಅರಿವು ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಬೀದರ್‌ನಿಂದ ಕಲಬುರಗಿ, ವಿಜಯಪುರ, ಬೆಳಗಾವಿ, ಗದಗ್, ಮುನಿರಾಬಾದ್, ಶಿಗ್ಗಾವಿ, ಶಿವಮೊಗ್ಗ, ಮಂಗಳೂರು, ಹಾಸನ, ಮೈಸೂರು ಮೂಲಕ ಬೆಂಗಳೂರು ಪ್ರವೇಶ ಮಾಡಲಿದೆ. ದಿನನಿತ್ಯ ಕನಿಷ್ಠ 200 ಕಿ.ಮೀ. ಕ್ರಮಿಸುವ ಗುರಿ ನಿಗದಿಪಡಿಸಿದ್ದು, ಈ ಜಾಥದ ಮಾರ್ಗದಲ್ಲಿ ಕ್ರೀಡಾಪಟುಗಳು, ಸೈಕಲ್ ಪ್ರೇಮಿಗಳು ಹಾಗೂ ಹೆಸರುವಾಸಿಯಾದ ಸೈಕಲ್ ಪಟುಗಳನ್ನು ಭೇಟಿ ಮಾಡಲಾಗುತ್ತದೆ. ಅಲ್ಲದೆ, ಜಿಲ್ಲೆ, ನಗರ, ತಾಲೂಕುಗಳಲ್ಲಿ ಸಂಚಾರದ ವೇಳೆ ಶಾಲಾ ಬಾಲಕ-ಬಾಲಕಿಯರಿಗೆ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದರು.

14 ದಿನಗಳ ಕಾಲ ನಡೆಯಲಿರುವ ಈ ಜಾಥದಲ್ಲಿ ಸ್ವತಃ ನಾನು ಭಾಗವಹಿಸಲಿದ್ದು, ಈ 14 ದಿನಗಳ ಸೈಕಲ್ ಜಾಥ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ, ಜಿಲ್ಲೆ, ತಾಲೂಕು, ಹಳ್ಳಿಗಳ ರಸ್ತೆಗಳ ಮೂಲಕ ಸಂಚರಿಸಿ ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯನಿರ್ವಣಾಧಿಕಾರಿಗಳು, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳು ಸೇರಿದಂತೆ ಸಾರ್ವಜನಿಕರೊಂದಿಗೆ ಬೆರೆತು ಸರಕಾರದ ವಿವಿಧ ಯೋಜನೆಗಳನ್ನು ಪ್ರಚಾರ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಭಾಸ್ಕರ್‌ರಾವ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಎಸ್‌ಆರ್‌ಪಿ ಕ್ರೀಡಾ ವಿಭಾಗದ ಅಧಿಕಾರಿ ಸಮರ್ಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News