×
Ad

ಅಂಬೇಡ್ಕರ್ ವಿರೋಧಿಗಳ ಕೈಯಲ್ಲಿ ಸಂವಿಧಾನ: ಜ್ಞಾನಪ್ರಕಾಶ ಸ್ವಾಮೀಜಿ

Update: 2017-07-08 19:35 IST

ಬೆಂಗಳೂರು, ಜು.8: ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಪರಿಶ್ರಮದ ಫಲದಿಂದ ಬರೆದುಕೊಟ್ಟ ಸಂವಿಧಾನದ ಮೇಲೆ ದಾಳಿಗಳು ನಡೆಯುತ್ತಿವೆ. ಅಂಬೇಡ್ಕರ್ ವಿರೋಧಿಗಳ ಕೈಯಲ್ಲಿ ಇಂದು ಸಂವಿಧಾನವಿದೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ವೆಂಕಟಗಿರಿಗೌಡ ಸಭಾಂಗಣದಲ್ಲಿ ರಾಮನಗರ ಜಿಲ್ಲೆಯ ಪ್ರೇರಣಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ‘ಜನಪರ ಕಲೆ ಮತ್ತು ಸಂಸ್ಕೃತಿ ಉತ್ಸವ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಸಂವಿಧಾನವನ್ನು ನಿರ್ಜೀವವನ್ನಾಗಿ ಮಾಡುವ ಎಲ್ಲಾ ಪ್ರಯತ್ನಗಳು ಕಳೆದ ಹಲವು ವರ್ಷಗಳಿಂದ ರಹಸ್ಯವಾಗಿ ಕಾರ್ಯಾಚರಣೆಯಾಗುತ್ತಿವೆ. ಇವತ್ತು ಈ ದೇಶದಲ್ಲಿ ‘ಒಂದೇ ದೇಶ, ಒಂದೇ ತೆರಿಗೆ’ ಎನ್ನುತ್ತಾರೆ. ಮುಂದೆ ಹಾಗೆಯೆ ಒಂದೇ ದೇಶ, ಒಂದೇ ಸಂಸ್ಕೃತಿ ಎಂದು ಕಾನೂನು ರೂಪಿಸಿದರೆ ಏನು ಮಾಡುವುದು ಎಂದು ಅವರು ಪ್ರಶ್ನಿಸಿದರು.

ವಿಶ್ವವಿದ್ಯಾಲಯಗಳು ಯುವಕರನ್ನು ಕೇವಲ ಶಿಕ್ಷಿತರನ್ನಾಗಿ ಮಾಡುತ್ತಿದ್ದಾವೆಯೇ ಹೊರತು, ಪ್ರಬುದ್ಧ ಯುವ ಜನಾಂಗವನ್ನು ರೂಪಿಸದೆ ಇರುವುದು ನಮ್ಮ ದುರ್ದೈವವಾಗಿದೆ. ಪಿಎಚ್‌ಡಿ ಪಡೆದವರು ದೇವರ ಮುಂದೆ ನಿಂತು ನನ್ನೆಲ್ಲ ನಿಗದಿ, ನಿರ್ಧಾರಗಳಿಗೆಲ್ಲ ದೇವರೆ ಕಾರಣವೆಂದು ಕೈಕಟ್ಟಿ ನಿಲ್ಲುವುದನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಯುವ ಸಮೂಹದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಪಠ್ಯಕ್ರಮವನ್ನು ಆಮೂಲಾಗ್ರವಾಗಿ, ಸಮಾಜಮುಖಿಯಾಗಿ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿ, ದಲಿತರನ್ನು ಮತ್ತು ಮಹಿಳೆಯರನ್ನು ಎರಡನೆ ದರ್ಜೆಯ ನಾಗರಿಕರಂತೆ ಮಾಡಲಾಗಿರುವ ಈ ಪುರೋಹಿತಶಾಹಿಯನ್ನು ದೇಶದಿಂದಲೇ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಈ ದೇಶವನ್ನು ‘ಮರ್ಯಾದ ಭಾರತ’ವೆಂದು ಹೇಗೆ ಕರೆಯಲಿ, ಪುರೋಹಿತ ಶಾಹಿಗಳು ಈ ದೇಶದ ಘನತೆ ಮತ್ತು ಗೌರವವನ್ನು ಕೊಂದು ಹಾಕಿದ್ದಾರೆ. ಈ ಭಾರತ ಬಹುಜನರಿಗೆ ಸೇರಿದ್ದು, ಈ ದೇಶದ ಸಂಸ್ಕೃತಿಯನ್ನು ಅನಾದಿಕಾಲದಿಂದಲೂ ಬಹುಜನರು ಪೋಷಿಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.

ಕಲೆ ಮತ್ತು ಸಂಸ್ಕೃತಿಗೆ ದಲಿತ, ಬುಡಕಟ್ಟು, ಅಲೆಮಾರಿ, ಆದಿವಾಸಿಗಳ ಕೊಡುಗೆ ಅನನ್ಯವಾದದ್ದು. ಆದರೆ, ದುರಂತವೆಂದರೆ ಇವತ್ತಿನ ಪರಿಸ್ಥಿತಿ ಬೇರೆಯೆ ಆಗಿದೆ. ಭಾರತದಲ್ಲಿ ತನ್ನ ಸಂಸ್ಕೃತಿಯನ್ನೆ ಇನ್ನೊಬ್ಬರು ಅನುಸರಿಸಬೇಕೆಂಬ ಹುನ್ನಾರ ನಡೆಯುತ್ತಿರುವುದು ಬದಲಾವಣೆಯ ಕಡೆಗೆ ಮುಖ ಮಾಡುತ್ತಿರುವ ಭಾರತಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಈ ಭಾರತಕ್ಕೆ ಬೇಕಾಗಿರುವುದು ರಾಮ ಮಂದಿರನೂ ಅಲ್ಲ, ಶಿವ ಮಂದಿರನೂ ಅಲ್ಲ, ‘ಸಹಿಷ್ಣುತೆಯ ಮಂದಿರ’. ನಮ್ಮನ್ನಾಳುವ ಸರಕಾರಗಳು, ಪ್ರಜೆಗಳಿಗೆ ಸುಖ-ಸಂತೋಷ-ಸಮೃದ್ಧಿಯನ್ನು ಕೊಡಮಾಡಬೇಕೆ ವಿನಃ ಕೋಮು ಸೌಹಾರ್ದವನ್ನು ಕೆಡಿಸುವ ಸಂಘಪರಿವಾರದವರ ಕೈಗೆ ಕೋಲನ್ನು ಕೊಟ್ಟು ಬಡಿಸುತ್ತಿರುವುದು ಈ ನೆಲದ ದುರಂತವಾಗಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್‌ಯವರು ರೂಪಿಸಿದ ಭಾರತ ಇವತ್ತು ಅಪಾಯದಂಚಿನಲ್ಲಿದೆ. ಆದುದರಿಂದ, ವಿದ್ಯಾರ್ಥಿಗಳು, ಯುವಜನತೆ ಈ ದೇಶವನ್ನು ಉಳಿಸಿಕೊಳ್ಳುವ ಕಡೆಗೆ ಹೋರಾಟವನ್ನು ರೂಪಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ನಂತರ ಡಾ.ಕೆ.ರಾಮಕೃಷ್ಣಯ್ಯ ನಿರ್ದೇಶನದ ಮಂಟೇಸ್ವಾಮಿ ಕಥಾಪ್ರಸಂಗ ನಾಟಕವನ್ನು ಪ್ರದರ್ಶನಗೊಳಿಸಲಾಯಿತು. ಇದಕ್ಕೂ ಮುನ್ನ ವಿಶ್ವವಿದ್ಯಾಲಯದ ಆವರಣದ ಬೀದಿಯಲ್ಲಿ ಮೆರವಣಿಗೆಯನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಬೆಸ್ಕಾಂನ ಮುಖ್ಯ ಇಂಜಿನಿಯರ್ ಉದಯ್‌ಕುಮಾರ್, ಹೋರಾಟಗಾರ ಗೋವಿಂದರಾಜು, ಇಎಸ್‌ಐ ಆಸ್ಪತ್ರೆಯ ವೈದ್ಯ ಚಂದ್ರಶೇಖರ ಮೂರ್ತಿ, ಸಾಯಿರಾಂ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News