ರಿಯಾಯಿತಿ ದರದಲ್ಲಿ ಸಿರಿಧಾನ್ಯಗಳ ಸಂಸ್ಕರಣಾ ಯಂತ್ರೋಪಕರಣಗಳ ವಿತರಣೆಗೆ ಕ್ರಮ: ಕೃಷ್ಣ ಬೈರೇಗೌಡ
ಬೆಂಗಳೂರು, ಜು. 8: ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸುವ ಹಾಗೂ ಕಡಿಮೆ ದರದಲ್ಲಿ ಕಾಳುಗಳನ್ನು ನೀಡುವ ಉದ್ದೇಶದಿಂದ ಸಂಸ್ಕರಣಾ ಯಂತ್ರೋಪಕರಣಗಳನ್ನು ರಿಯಾಯತಿ ದರದಲ್ಲಿ ರೈತರಿಗೆ ವಿತರಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶನಿವಾರ ನಗರದ ನಾಗರಬಾವಿಯ ಮೈದಾನದಲ್ಲಿ ಸಾವಯವ ಉತ್ಪನ್ನಗಳ ಹಾಗೂ ಸಣ್ಣ ಸಿರಿಧಾನ್ಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೃಷಿ ಇಲಾಖೆ, ಕೃಷಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಕರಣೆಗೆ ಅಗತ್ಯವಾಗಿರುವ ಯಂತ್ರೋಪಕರಣಗಳು ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇದರಿಂದ ಸಾವಯವ ಸಿರಿಧಾನ್ಯಗಳ ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಿನ ದರಗಳ ಹಿನ್ನಲೆಯಲ್ಲಿ ಗ್ರಾಹಕರಿಗೆ ಸಿರಿಧಾನ್ಯಗಳು ಗಗನ ಕುಸುಮವಾಗಿ ಪರಿಣಮಿಸಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಮಂದಿ ರೈತರು ಪ್ರಮಾಣೀಕೃತ ಸಾವಯವ ಬೆಳೆಗಾರರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 12ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳ ಬೆಳೆಗಳನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಸಿರಿಧಾನ್ಯಗಳಿಗೆ ಸೂಕ್ತ ಮಾರುಕಟ್ಟೆ ವಿಸ್ತರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಿರಿಧಾನ್ಯಗಳ ಸಂಸ್ಕರಣೆಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಕೃಷಿ ಇಲಾಖೆ ವತಿಯಿಂದ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ವಸತಿ ಸಚಿವ ಎಂ.ಕೃಷ್ಣಪ್ಪಮಾತನಾಡಿ, ಸಿರಿಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿ. ಆರೋಗ್ಯದ ದೃಷ್ಟಿಯಿಂದ ಆಧುನಿಕ ಜೀವನದಲ್ಲಿ ಸಿರಿಧಾನ್ಯಗಳ ಬಳಕೆ ತೀರಾ ಅಗತ್ಯವಾಗಿದೆ. ಸಿರಿಧಾನ್ಯಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ರಾಜ್ಯ ಸರಕಾರ ಮುಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಕೃಷ್ಣ, ಸಾವಯವ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಇತರರು ಇದ್ದರು.