×
Ad

ಜು.21ರಿಂದ ಮೂರು ದಿನಗಳ ಕಾಲ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ

Update: 2017-07-08 19:59 IST

ಬೆಂಗಳೂರು, ಜು.8: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜನ್ಮ ವರ್ಷಾಚರಣೆ ಅಂಗವಾಗಿ ಜು.21ರಿಂದ ಮೂರು ದಿನ ಬೆಂಗಳೂರು ಜಿಕೆವಿಕೆಯ ಸಮಾವೇಶ ಕೇಂದ್ರದಲ್ಲಿ ‘ಸಾಮಾಜಿಕ ನ್ಯಾಯದ ಮರು ಅನುಷ್ಠಾನ-ಅಂಬೇಡ್ಕರ್ ಪುನರ್ ಪ್ರವೇಶ’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನದ ಲಾಂಛನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಮ್ಮೇಳನದಲ್ಲಿ 2ಸಾವಿರಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದು, 83ಅಂತಾರಾಷ್ಟ್ರೀಯ, 149 ರಾಷ್ಟ್ರೀಯ ಮತ್ತು 80 ಮಂದಿ ರಾಜ್ಯದ ಭಾಷಣಕಾರರು ವಿಷಯ ಮಂಡಿಸಲಿದ್ದಾರೆ ಎಂದರು.

ಉದ್ಘಾಟಣೆ: ಅಂತಾರಾಷ್ಟ್ರೀಯ ಸಮಾವೇಶದ ಉದ್ಘಾಟನೆಗೆ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ನ್ಯಾಯವಾದಿ ಮಾರ್ಟಿನ್ ಲೂಥರ್ ಕಿಂಗ್-3, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಅವರು ವಿವರಿಸಿದರು.

ಸಾಮಾಜಿಕ ನ್ಯಾಯದ ಮೇಲೆ ದಬ್ಬಾಳಿಕೆ, ಅಸ್ಪಶ್ಯತೆ, ಅಸಮಾನತೆ ಸಂದರ್ಭದಲ್ಲಿ ಈ ಸಮ್ಮೇಳನ ನಡೆಯುತ್ತಿದ್ದು, ಶೋಷಣೆ ರಹಿತ ಸಮಾಜ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅನ್ವೇಷಣೆ, ಸಾಂವಿಧಾನಿಕ, ಸಾಂಸ್ಥಿಕ ಮತ್ತು ನೀತಿ ನಿರೂಪಣೆಗೆ ಸೇತುವೆಯಾಗುವುದು ಉದ್ದೇಶವಾಗಿದೆ ಎಂದು ಸಿದ್ದರಾಮಯ್ಯ ಅಪೇಕ್ಷೆಪಟ್ಟರು.

‘ನೀನು ಯಾರೇ ಆಗಿರು, ಎಲ್ಲಿಂದಲೇ ಬಂದಿರು ನೀನು ಈ ದೇಶದಲ್ಲಿ ನ್ಯಾಯಯುತವಾದ ಸಮಾನತೆಗೆ ಅರ್ಹನಾಗಿರುತ್ತೀಯ’ ಎಂಬ ಅಂಬೇಡ್ಕರ್ ಅವರ ಮಾತಿನ ಸ್ಫೂರ್ತಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನದ ಆದರ್ಶ. ಮಾತ್ರವಲ್ಲ ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಭರವಸೆಯನ್ನು ವಿಶ್ವಕ್ಕೆ ಸಾರುವುದಾಗಿದೆ ಎಂದು ಸಿದ್ದರಾಮಯ್ಯ ನುಡಿದರು.

ಪ್ರೊ.ಸುಖದೇವ್ ತೋರಟ್, ಅರುಣರಾಯ್, ನಿಖಿಲ್‌ಡೇ, ಪ್ರೊ.ಶಿವ ವಿಶ್ವನಾಥನ್, ಡಾ.ಶಶಿತರೂರ್, ಕೆ.ರಾಜು, ಸಲ್ಮಾನ್ ಖುರ್ಷಿದ್, ಪ್ರಕಾಶ್ ಅಂಬೇಡ್ಕರ್, ಆನಂದ್ ತೇಲ್‌ತುಂಬ್ಡೆ, ವಿಲ್ಸನ್ ಬೆಜವಾಡ, ಪ್ರೊ.ಆಕಾಶ್ ರಾಥೋಡ್ ಸೇರಿದಂತೆ ದೇಶ-ವಿದೇಶಗಳ ಹಲವು ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.

ದೇವನೂರ ಮಹಾದೇವ, ಪ್ರೊ.ರವಿವರ್ಮ ಕುಮಾರ್, ಡಾ.ಚಂದ್ರಶೇಖರ ಕಂಬಾರ, ಡಾ.ಸಿದ್ದಲಿಂಗಯ್ಯ. ಡಾ.ಕೆ.ಮರುಳ ಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್, ದಿನೇಶ್ ಅಮೀನ್ ಮಟ್ಟು, ಪ್ರೊ.ರಹಮತ್ ತರೀಕೆರೆ, ನ್ಯಾ.ನಾಗಮೋಹನ್ ದಾಸ್, ಬಿ.ಟಿ.ಲಲಿತಾ ನಾಯಕ್, ಮೊಗಳ್ಳಿ ಗಣೇಶ್, ಗೌರಿ ಲಂಕೇಶ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನೋಂದಣಿwww.questforequity. org, www.facebook.com/ questforequity, : ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹಾಗೂ ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿಗಾಗಿ ಟ್ವಿಟರ್ www. twitter.com/ quest4equity/@quest4equity ಸಂಪರ್ಕಿಸಬಹುದು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಟಿ.ಬಿ.ಜಯಚಂದ್ರ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್‌ಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಸಲಹೆಗಾರ ಇ.ವೆಂಕಟಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News