×
Ad

​ಸಂಚಾರಿ ಪೇದೆ ಮೇಲೆ ಯುವಕರಿಂದ ಹಲ್ಲೆ

Update: 2017-07-08 20:16 IST

ಬೆಂಗಳೂರು, ಜು.8: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಸಂಚಾರಿ ಪೇದೆಯೊಬ್ಬರ ಮೇಲೆ ಹಲ್ಲೆ ನಡೆದ ಘಟನೆಯು ಕೆ.ಆರ್.ಪುರ ಸಂಚಾರಿ ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಸಂಚಾರಿ ಪೇದೆ ಶಿವಾನಂದ್ ರಾಥೋಡ್ ಕೆ.ಆರ್.ಪುರ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ಭಟ್ಟರಹಳ್ಳಿ ಬಳಿ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ಅವರನ್ನು ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಮೀಪದ ಹಂಸ ಆಶ್ರಮದ ಬಳಿ ಹತ್ತಕ್ಕೂ ಹೆಚ್ಚು ಯುವಕರ ಗುಂಪೊಂದು ಯುವತಿಯನ್ನು ಚುಡಾಯಿಸುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಶಿವಾನಂದ್, ಈ ಬಗ್ಗೆ ಯುವಕರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕರು ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಸಂಚಾರ ನಿಯಂತ್ರಣ ಮಾಡುವುದು ನಿನ್ನ ಕೆಲಸ, ಇದರಲ್ಲಿ ತಲೆ ಹಾಕಬೇಡ ಎಂದು ಏರು ಧ್ವನಿಯಲ್ಲಿ ಧಮಕಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಚಾರ ದಟ್ಟಣೆ ನಿಯಂತ್ರಣವಷ್ಟೇ ಅಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಶಿವಾನಂದ ರಾಥೋಡ್, ಯುವಕರಿಗೆ ತಿರುಗೇಟು ನೀಡಿದ್ದಾರೆ. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ಬೆಳೆದು ಯುವಕರು ಪೇದೆ ಮೆಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಮೇಡಹಳ್ಳಿಯ ನದೀಮ್, ಅಲ್ಲು, ಮುಬಾರಕ್ ಸೇರಿದಂತೆ 10ಕ್ಕೂ ಹೆಚ್ಚು ಜನರ ಗುಂಪು, ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪುರ ಠಾಣಾ ಪೊಲೀಸರು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಎಎಸ್ಸೈ ಮೇಲೆ ಹಲ್ಲೆ: ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರು ತೆಗೆಯುವಂತೆ ಸೂಚಿಸಿದ ಕೆ.ಆರ್.ಪುರ ಸಂಚಾರಿ ಠಾಣೆ ಎಎಸ್ಸೈ ರಾಮನಾಯಕ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಎಚ್‌ಎಸ್‌ಆರ್ ಲೇಔಟ್‌ನ ಇಮ್ರಾನ್, ಸಿದ್ದೀಕ್ ಎಂಬವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಇರ್ಫಾನ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News