×
Ad

​ಅಧಿಕಾರಿಗಳ ನಿರ್ಲಕ್ಷದಿಂದ ಕಾಡ್ಗಿಚ್ಚು ಪ್ರಮಾಣ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-07-09 17:45 IST

ಬೆಂಗಳೂರು, ಜು.9: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕಾಡ್ಗಿಚ್ಚಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಆಯೋಜಿಸಿದ್ದ ‘ವನಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ಅರಣ್ಯ ಕಾಡ್ಗಿಚ್ಚನ್ನು ತಡೆಯಬಹುದು.ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಅರಣ್ಯ ಪ್ರದೇಶಗಳಿಗೆ ಹೋಗುವಂತೆ ಅರಣ್ಯ ಸಚಿವರು ಸೂಚನೆ ನೀಡಬೇಕು ಎಂದರು.

ಕಾಡ್ಗಿಚ್ಚಿನ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಅರಣ್ಯ ರಕ್ಷಣೆ ಹಾಗೂ ವನ್ಯಜೀವಿಗಳ ರಕ್ಷಣೆ ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಎಲ್ಲ ವಯೋಮಾನದವರು ಮುಂದಾಗಬೇಕು ಎಂದು ಕರೆ ನೀಡಿದ ಅವರು, ಬಂಜರು ಭೂಮಿ, ಸರಕಾರಿ ಜಾಗ, ಶಾಲಾ ಆವರಣ ಸೇರಿದಂತೆ ವಿವಿಧೆಡೆ ಮರ ಗಿಡಗಳನ್ನು ಬೆಳಿಸಿ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ವಿಸ್ತರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 1.92 ಲಕ್ಷ ಚ. ಕಿ.ಮೀ. ಪ್ರದೇಶದಲ್ಲಿ ಕೇವಲ 38 ಸಾವಿರ ಚ.ಕಿ.ಮೀ. ಮಾತ್ರ ಅರಣ್ಯ ಪ್ರದೇಶವಿದೆ. ಆರು ವರ್ಷಗಳಿಂದ ನಿರಂತರ ಬರಗಾಲದಿಂದ ಅರಣ್ಯ ಪ್ರದೇಶದಲ್ಲಿ ನೀರು ಮತ್ತು ಮೇವಿನ ಕೊರತೆ ಇದ್ದು ಪ್ರಾಣಿ, ಪಕ್ಷಿಗಳಿಗೆ ಆಹಾರದ ಸಮಸ್ಯೆ ತಲೆದೋರಿದೆ. ಕಾಡಂಚಿನ ಹಳ್ಳಿಗಳ ಬೆಳೆ ನಾಶವಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಮಳೆಗಾಲದಲ್ಲಿ ಅರಣ್ಯ ಭೂಮಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಜಾನುವಾರುಗಳಿಗೆ ಮೇವು ಬೆಳೆಯಬೇಕು ಎಂದು ತಿಳಿಸಿದರು. ಈ ವರ್ಷ ಕೃಷಿ ಮತ್ತು ಅರಣ್ಯ ಯೋಜನೆಯಡಿಯಲ್ಲಿ ಆರು ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿಲಾಗಿದೆ. ಈ ಯೋಜನೆಯಲ್ಲಿ ಉಳಿಯುವ ಸಸಿಗೆ 45 ರಿಂದ 100ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಅರಣ್ಯ ಸಚಿವ ರಮಾನಾಥ್ ರೈ ಮಾತನಾಡಿ, ಪ್ರಾಣಿ ಮತ್ತು ಮನುಷ್ಯನ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆನೆಗಳು ನಾಡಿಗೆ ಬರದಂತೆ ತಡೆಯಲು ರೈಲ್ವೆ ಪಟ್ಟಿ ಬಳಸಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಇದುವರೆಗೂ 40 ಕಿ.ಮೀ. ಕಂದಕ ನಿರ್ಮಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News