ಪುರೋಹಿತಶಾಹಿ ವ್ಯವಸ್ಥೆ ಮರುಸ್ಥಾಪಿಸುವ ಹುನ್ನಾರ: ಪ್ರೊ.ಸಿ.ಎನ್.ರಾಮಚಂದ್ರನ್
ಬೆಂಗಳೂರು, ಜು.9: ಇತ್ತೀಚಿಗೆ ಮಹಿಳೆಯರಿಗೆ ನೀಡಿರುವ ಸ್ವಾತಂತ್ರ ಜಾಸ್ತಿಯಾಗಿದೆ. ಹೀಗಾಗಿ ಕಾನೂನುಗಳನ್ನು ಬದಲಿಸಬೇಕೆಂದು ಹೇಳುವ ಮೂಲಕ ಪುರೋಹಿತಶಾಹಿ ವ್ಯವಸ್ಥೆಯನ್ನು ಮರುಸ್ಥಾಪಿಸುವ ಹುನ್ನಾರ ನಡೆಯುತ್ತಿದೆ ಎಂದು ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಪಲ್ಲವ ಪ್ರಕಾಶನದಿಂದ ಆಯೋಜಿಸಿದ್ದ ಚಂದ್ರಶೇಖರ್ ಮಂಡೆಕೋಲು ಅವರ ‘ಅಗ್ನಿ ದಿವ್ಯದ ಹುಡುಗಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಸ್ತ್ರೀಗೆ ಸ್ವಾತಂತ್ರ ಸಿಕ್ಕಿದೆ ಎಂದು ವಾದ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಚಿಂತನಲ್ಲಿನ ಚೌಕಟ್ಟುಗಳಲ್ಲಿ ಕೆಲವು ಬದಲಾಗಿವೆ. ಆದರೂ, ಇಂದಿನ ಸಮಾಜದಲ್ಲಿ 200 ವರ್ಷಗಳ ಹಿಂದಿನ ಸ್ಥಿತಿ ಇಂದಿಗೂ ಮುಂದುವರಿದಂತೆ ಕಾಣುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ಹೆಣ್ಣನ್ನು ಮಹಾಲಕ್ಷ್ಮಿ, ಸರಸ್ವತಿ ಸೇರಿದಂತೆ ಅನೇಕ ದೇವರುಗಳಿಗೆ ಹೋಲಿಕೆ ಮಾಡಿ ಶಿಕ್ಷಣ, ಸಾಮಾಜಿಕ ಅಧಿಕಾರ, ಹಲವಾರು ಸೌಲಭ್ಯಗಳಿಂದ ವಂಚಿಸಲಾಗಿದೆ. ಪುರುಷರಿಗೆ ಸಿಗುತ್ತಿರುವ ಗೌರವ ಸ್ತ್ರೀಯರಿಗೆ ಸಿಗುತ್ತಿಲ್ಲ. ಮಹಿಳೆಯರು ನ್ಯಾಯಾಧೀಶೆ, ಪೊಲೀಸ್, ಮಿಲಿಟರಿ ಸೇರಿದಂತೆ ಬಹಳಷ್ಟು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರು ಶಿಕ್ಷಿತರಾಗುವುದರಿಂದ ಸಮಾಜ ಹಾಳಾಗುತ್ತದೆ ಎನ್ನುವ ಮೂಲಕ ಪುರುಷರು ಮಾತ್ರ ಶಿಕ್ಷಿತರಾಗಬೇಕು ಎಂಬ ಮನೋಭಾವವನ್ನು ಸೃಷ್ಟಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕೃತಿಯು ಸ್ತ್ರೀ ಕುರಿತ ಭಾವನೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅರ್ಥ ಮಾಡಿಸುತ್ತದೆ. ಅಲ್ಲದೆ, ಶ್ರಮ, ಸಂಕಟ, ಅವಮಾನಗಳ ಕಥನಗಳನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.
ಅನಾದಿಕಾಲದಿಂದಲೂ ಮಹಿಳೆಯರನ್ನು ಹಲವಾರು ರೀತಿಯಲ್ಲಿ ಹಿಂಸಿಕೊಂಡು ಬರಲಾಗಿದೆ. ಸ್ತ್ರೀಯರ ಪಾವಿತ್ರತೆಯನ್ನು ರುಜು ಮಾಡಲು ಅನೇಕ ಹಿಂಸೆಗಳನ್ನು ನೀಡಿದ್ದಾರೆ. ಅದರಿಂದ ಆನಂದಿಬಾಯಿ ದೂರವಾಗಿಲ್ಲ ಎಂದ ಅವರು, ಆನಂದಿಬಾಯಿ, ರಮಾಭಾಯಿ ಸೇರಿದಂತೆ ಇಂದಿನ ಮಲಾಲವರೆಗೂ ಅನೇಕ ಸ್ತ್ರೀಯರು ತಮ್ಮ ತನವನ್ನು ಸಾಭೀತುಪಡಿಸಲು ಅನೇಕ ದಿವ್ಯಗಳನ್ನು ಸಾರ್ವಜನಿಕವಾಗಿ ನಮ್ಮ ಸಮಾಜ ನೀಡಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ.ಆಶಾ ಬೆನಕಪ್ಪ, ಲೇಖಕ ಚಂದ್ರಶೇಖರ್ ಮಂಡೆಕೋಲು ಉಪಸ್ಥಿತರಿದ್ದರು.