ಸೂಟ್‌ಕೇಸ್ ಪಡೆಯುತ್ತಿದ್ದವರು ಹೊರ ಹೋಗಿದ್ದಾರೆ: ಎಚ್.ಡಿ.ಕುಮಾರಸ್ವಾಮಿ
Update: 2017-07-10 18:15 IST
ಬೆಂಗಳೂರು, ಜು.10: ಜೆಡಿಎಸ್ ಪಕ್ಷದಲ್ಲಿ ಸೂಟ್‌ಕೇಸ್ ಪಡೆಯುತ್ತಿದ್ದವರು ಇದ್ದದ್ದು ನಿಜ. ಮುಂದಿನ ಸಾಲಿನಲ್ಲಿ ಕೂರುತ್ತಿದ್ದದ್ದು ನಿಜ. ಆದರೆ, ಈಗಾಗಲೇ ಅಂತಹವರು ಪಕ್ಷ ಬಿಟ್ಟು ಹೊರ ಹೋಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಬಹುಶಃ ಅವರನ್ನು ಕುರಿತು ಈ ಹೇಳಿಕೆ ನೀಡಿರಬಹುದು ಎಂದು ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ಝಮೀರ್‌ಅಹ್ಮದ್, ಬಾಲಕೃಷ್ಣ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದರು.
ಪ್ರಜ್ವಲ್ ರೇವಣ್ಣ ನನ್ನನ್ನು ಭೇಟಿ ಮಾಡಿ ಕ್ಷಮೆ ಕೇಳುವ ಅಗತ್ಯವಿಲ್ಲ. ಅಂತಹ ತಪ್ಪನ್ನು ಆತ ಮಾಡಿಲ್ಲ. ನನ್ನನ್ನು ಉಲ್ಲೇಖಿಸಿ ಆತ ಸೂಟ್‌ಕೇಸ್ ಸಂಸ್ಕೃತಿಯ ಹೇಳಿಕೆ ನೀಡಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು, ವಿಶ್ಲೇಷಣೆಗಳನ್ನು ಗಮನಿಸಿದ್ದೇನೆ. ಆದುದರಿಂದ, ಈ ಬಗ್ಗೆ ಚರ್ಚೆ ಮಾಡುವುದು ಅನವಶ್ಯಕ ಎಂದು ಅವರು ಹೇಳಿದರು.