×
Ad

‘ಸೂಟ್‌ಕೇಸ್ ಸಂಸ್ಕೃತಿ’ ಸಿಬಿಐಗೆ ಪತ್ರ ಬರೆಯಲು ಸಿದ್ಧ: ಝಮೀರ್‌ ಅಹ್ಮದ್

Update: 2017-07-10 19:45 IST

ಬೆಂಗಳೂರು, ಜು.10: ಸೂಟ್‌ಕೇಸ್ ಸಂಸ್ಕೃತಿಯ ಬಗ್ಗೆ ನಾನು ಸಿಬಿಐಗೆ ಪತ್ರ ಬರೆಯಲು ಸಿದ್ಧ. ಅದರಂತೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯೂ ಪತ್ರ ಬರೆಯಲಿ ಎಂದು ಜೆಡಿಎಸ್ ಬಂಡಾಯ ಶಾಸಕ ಝಮೀರ್ ಅಹ್ಮದ್‌ಖಾನ್ ಸವಾಲು ಹಾಕಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾತಿನ ಮಲ್ಲ. ಸೂಟ್‌ಕೇಸ್ ಸಂಸ್ಕೃತಿ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಯನ್ನು ನೀಡಿದ್ದಾರೆ ಎಂದರು.

ಎದುರು ಸಾಲಿನಲ್ಲಿ ಕುಳಿತುಕೊಂಡು ಸೂಟ್‌ಕೇಸ್ ಪಡೆದವರು ಪಕ್ಷದಿಂದ ಹೊರಗೆ ಹೋಗಿದ್ದಾರೆ ಎಂದಿರುವ ಕುಮಾರಸ್ವಾಮಿ, ಅವರ ಹೆಸರನ್ನು ಬಹಿರಂಗ ಪಡಿಸಲಿ. ಕುಟುಂಬದ ಗೂಬೆಯನ್ನು ನಮ್ಮ ಮೇಲೆ ಕೂರಿಸುವುದು ಬೇಡ ಎಂದು ಅವರು ಹೇಳಿದರು.
ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿಯಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ ಮೂರು ದಿನಗಳ ಬಳಿಕ ಸಿದ್ಧತೆ ಮಾಡಿಕೊಂಡು ಕುಮಾರಸ್ವಾಮಿ ಇವತ್ತು ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆ ನೋಡಿದರೆ ನನ್ನನ್ನೆ ಟಾರ್ಗೆಟ್ ಮಾಡಿದಂತಿದೆ. ಕುಮಾರಸ್ವಾಮಿಗೆ ರಾಜಕೀಯ ಅನಿವಾರ್ಯ. ಆದರೆ, ನನಗಲ್ಲ ಎಂದು ಝಮೀರ್‌ ಅಹ್ಮದ್ ತಿಳಿಸಿದರು.

ಬಿ.ಎಂ.ಫಾರೂಕ್ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹೇಗೆ ಸ್ಪರ್ಧಿಸಿದರು. ಟಿ.ಎ.ಶರವಣ ಹೇಗೆ ವಿಧಾನಪರಿಷತ್ ಸದಸ್ಯರಾದರು ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ನಮಗೆ ತಾಯಿ ಸಮಾನ. ಆದರೆ, ಈಗ ತಾಯಿ ಮನೆಯಿಂದಲೇ ಹೊರ ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಶಕ್ತಿಯನ್ನು ತೋರಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News