‘ಸೂಟ್‌ಕೇಸ್ ಸಂಸ್ಕೃತಿ’ ಬಹಿರಂಗ ಚರ್ಚೆಗೆ ಸಿದ್ಧ: ಎಚ್.ಸಿ.ಬಾಲಕೃಷ್ಣ
ಬೆಂಗಳೂರು, ಜು.10: ಸೂಟ್‌ಕೇಸ್ ಸಂಸ್ಕೃತಿ ಸೇರಿದಂತೆ ಅನೇಕ ವಿಷಯಗಳ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಅವಕಾಶ ನೀಡಿದರೆ, ಎಚ್.ಡಿ. ಕುಮಾರಸ್ವಾಮಿ ಜೊತೆ ಬಹಿರಂಗ ಚರ್ಚೆ ಮಾಡಲು ಸಿದ್ಧ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿದ್ದಾರೆ.
ಸೋಮವಾರ ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೂಟ್‌ಕೇಸ್ ಸಂಸ್ಕೃತಿ ಕುರಿತು ಮಾತನಾಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ದೇವೇಗೌಡರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಮೂರು ದಿನ ಯೋಚನೆ ಮಾಡಿ, ಈಗ ಭಿನ್ನಮತೀಯರ ಮೇಲೆ ಹಾಕಿದ್ದಾರೆ ಎಂದರು.
ಸೂಟ್‌ಕೇಸ್ ಇಲ್ಲದೆ ರಾಜಕಾರಣ ಮಾಡಲು ಆಗುವುದಿಲ್ಲ. ಎಲ್ಲ ಪಕ್ಷಗಳಲ್ಲೂ ದೇಣಿಗೆಯನ್ನು ಪಡೆಯುತ್ತಾರೆ. ರಾಜಕೀಯ ಪಕ್ಷಗಳನ್ನು ಕಟ್ಟಲು ಸೂಟ್‌ಕೇಸ್ ಬೇಕೆ ಬೇಕು. ಆದರೆ, ಈ ಬಗ್ಗೆ ಪ್ರಜ್ವಲ್ ಹೇಳಿಕೆ ನೀಡಿದ್ದ ದಿನದಂದೇ ಕುಮಾರಸ್ವಾಮಿ ಯಾಕೆ ಪ್ರತಿಕ್ರಿಯೆ ನೀಡಿಲ್ಲ. ಅವರು ಒಪ್ಪುವುದಾದರೆ ಸೂಟ್‌ಕೇಸ್ ವಿಚಾರದ ಬಗ್ಗೆ ಚರ್ಚೆ ಮಾಡಲು ಸಿದ್ಧ ಎಂದು ಅವರು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಬಿ.ಎಂ.ಫಾರೂಕ್‌ರನ್ನು ಯಾಕೆ ತರಲಾಯಿತು. ಈ ಚುನಾವಣೆವರೆಗೆ ಫಾರೂಕ್‌ರನ್ನು ನಾವು ನೋಡಿಯೇ ಇರಲಿಲ್ಲ. ಪಕ್ಷದಲ್ಲಿ ಬೇರೆ ಯಾರಿಗೂ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯಿರಲಿಲ್ಲವೇ ಎಂದು ಬಾಲಕೃಷ್ಣ ಪ್ರಶ್ನಿಸಿದರು.
ಪ್ರಜ್ವಲ್ ನೀಡಿರುವ ಹೇಳಿಕೆಯ ಬಗ್ಗೆಯಷ್ಟೇ ಕುಮಾರಸ್ವಾಮಿ ಮಾತನಾಡಲಿ, ಅದನ್ನು ಬಿಟ್ಟು ಎಲ್ಲ ವಿಚಾರಗಳನ್ನು ಭಿನ್ನಮತೀಯರ ಮೇಲೆ ಹಾಕುವುದು ಬೇಡ. ಅವರ ಹೆಸರೇ ಈಗ ‘ಹಿಟ್ ಅಂಡ್ ರನ್ ಕುಮಾರಸ್ವಾಮಿ’ಯಾಗಿದೆ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.
ನಾನಾಗಲಿ, ಚೆಲುವರಾಯಸ್ವಾಮಿಯಾಗಲಿ ಸೂಟ್‌ಕೇಸ್ ಪಡೆದಿರುವುದನ್ನು ಪ್ರಜ್ವಲ್ ನೋಡಿದ್ದಾರೆಯೇ ಕೇಳಿ. ದೇವೇಗೌಡರು ನಮ್ಮ ಬಗ್ಗೆ ಮಾತನಾಡಿಲ್ಲ. ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಪ್ರಜ್ವಲ್ ಹೇಳಿಕೆಯಿಂದ ಆಗಿರುವ ‘ಡ್ಯಾಮೇಜ್’ ಕಂಟ್ರೋಲ್ ಮಾಡಲು ನಮ್ಮನ್ನು ಎಳೆತರುವ ಪ್ರಯತ್ನ ನಡೆದಿದೆ ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರ್ಪಡೆ ಖಚಿತ: ಭಿನ್ನಮತೀಯ 7 ಶಾಸಕರು ಒಟ್ಟಾಗಿದ್ದೇವೆ. ನಮಗೆಲ್ಲರಿಗೂ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಹೇಳಿದ್ದಾರೆ. ಚುನಾವಣೆಗೆ ಇನ್ನೂ ಎಂಟು ತಿಂಗಳಿದೆ. ಆಗ ಟಿಕೆಟ್ ಬಗ್ಗೆ ಮಾತನಾಡೋಣ. ಬೇರೆ ಯಾವ ಪಕ್ಷಕ್ಕೂ ಹೋಗುವ ಪರಿಸ್ಥಿತಿಯಲ್ಲಿ ನಾವಿಲ್ಲ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಪಕ್ಷೇತರರಾಗಿ ಕಣಕ್ಕಿಳಿಯುತ್ತೇವೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಜಾತ್ಯತೀತ ಜನತಾದಳದಲ್ಲಿದ್ದರು. ಕಾಂಗ್ರೆಸ್‌ಗೆ ಹೋಗಿ ಮುಖ್ಯಮಂತ್ರಿಯಾಗಲಿಲ್ಲವೇ. ದೇವೇಗೌಡರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲೇ, ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕೇವಲ 3 ಸಾವಿರ ಮತಗಳು ಬಂದಿದ್ದವು. ನಾನು ಆಗ ಬಿಜೆಪಿಯ ಶಾಸಕನಾಗಿದ್ದೆ. ಈಗ ಜೆಡಿಎಸ್ ಪರವಾದ ಮತಗಳ ಪ್ರಮಾಣ 75 ಸಾವಿರಕ್ಕೆ ಏರಿಕೆಯಾಗಿದೆ ಎಂದು ಬಾಲಕೃಷ್ಣ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಾಗ ಈ ಮತಗಳ ಪೈಕಿ ಶೇ.80ರಷ್ಟಾದರೂ ನನ್ನ ಬೆಂಬಲಕ್ಕೆ ಇರುತ್ತದೆ. ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳಿಗೆ ಪೂರಕವಾಗಿ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ಎಲ್ಲವನ್ನೂ ಜನ ನೋಡುತ್ತಿದ್ದಾರೆ. ಯಾರ ಜೊತೆ ಹೋಗಬೇಕು ಎನ್ನುವುದನ್ನು ಅವರು ನಿರ್ಧರಿಸುತ್ತಾರೆ ಎಂದು ಬಾಲಕೃಷ್ಣ ಹೇಳಿದರು.
ಸೂಟ್‌ಕೇಸ್ ವಿಚಾರದಲ್ಲಿ ನಾವೇನು ದೂರವಾಗಿಲ್ಲ. ಹೊಂದಾಣಿಕೆ, ಆತ್ಮವಿಶ್ವಾಸ ಹಾಗೂ ಪಕ್ಷ ಸಂಘಟನೆಯ ವಿಚಾರದಲ್ಲಿ ಹೊಂದಾಣಿಕೆಯಿಲ್ಲದ ಕಾರಣಕ್ಕಾಗಿ ದೂರವಾಗಿದ್ದೇವೆ. ಸೂಟ್‌ಕೇಸ್ ಹಾಗೂ ‘ಬಿ’ ಫಾರಂ ಅವರ ಸೊತ್ತು. ಸಾಲ ಸೋಲ ಮಾಡಿ ಪಕ್ಷ ಕಟ್ಟಿದ್ದೇವೆ ಎಂಬುದು ಸುಳ್ಳು. ಪಕ್ಷಕ್ಕೆ ಅನೇಕರು ಸಹಾಯ ಮಾಡಿದ್ದಾರೆ.ಎಂದು ಎಚ್.ಸಿ.ಬಾಲಕೃಷ್ಣ ಹೇಳೀದರು.