ತಿದ್ದುಪಡಿಯಿಂದ ಹಿಂದುಳಿದ ವರ್ಗಕ್ಕೆ ಅನುಕೂಲ: ಬಿ.ಜಿ.ಪುಟ್ಟಸ್ವಾಮಿ
ಬೆಂಗಳೂರು, ಜು. 10: ಸಂವಿಧಾನದ 123ನೆ ತಿದ್ದುಪಡಿಯಿಂದ ಹಿಂದುಳಿದ ವರ್ಗಗಳ ಅಧಿಕಾರ ಮೊಟಕಾಗುವುದಿಲ್ಲ. ಈ ವಿಚಾರದಲ್ಲಿ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ದೂರಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಿಂ.ವರ್ಗಗಳ ಆಯೋಗ ಕುರಿತ ಮಸೂದೆಗೆ ಲೋಕಸಭೆಯಲ್ಲಿ ಕೇಂದ್ರ ಸರಕಾರ ಅನುಮೋದನೆ ಪಡೆದಿದೆ. ರಾಜ್ಯಸಭೆಯಲ್ಲಿ ಜಂಟಿ ಸದನ ಸಮಿತಿಗೆ ವಹಿಸಿದೆ ಎಂದರು.
ಆದುದರಿಂದ ಸಿಎಂ ಸಿದ್ದರಾಮಯ್ಯ ರಾಜ್ಯಸಭೆಯಲ್ಲಿ ಮಸೂದೆ ಅನುಮೂದನೆಗೆ ರಾಜ್ಯಸಭಾ ಸದಸ್ಯರಿಗೆ ಕೂಡಲೇ ಪತ್ರ ಬರೆಯಬೇಕು. ಇಲ್ಲದಿದ್ದರೆ ಹಿಂದುಳಿದ ವರ್ಗದ ವಿರೋಧಿ ಎಂದು ಭಾವಿಸಬೇಕಾಗುತ್ತದೆ ಎಂದು ಪುಟ್ಟಸ್ವಾಮಿ ಪ್ರತಿಕ್ರಿಯೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರಿಗೆ ಕೇಂದ್ರದ ಮಸೂದೆ ಅಧ್ಯಯನ ಮಾಡುವ ಸಾಮರ್ಥ್ಯವಿಲ್ಲ. ಹೀಗಾಗಿ ಕೇಂದ್ರ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರ ಮೊಟಕುಗೊಳಿಸುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಜಾತಿಗಳ ಹಿಂದುಳಿದ ವರ್ಗಗಳ ಅರ್ಹತೆ ಮಾನದಂಡ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿದೆ. ಮಂಡಲ್ ಆಯೋಗದ ವರದಿ ಅನ್ವಯ ಒಕ್ಕಲಿಗ ಜನಾಂಗ ಹಿಂದುಳಿದ ಜಾತಿ ಎನ್ನಲಾಗಿದೆ. ಆದರೆ, ರಾಜ್ಯದಲ್ಲಿ ಒಕ್ಕಲಿಗರು ಮುಂದುವರೆದ ಜನಾಂಗಕ್ಕೆ ಸೇರಿದ್ದಾರೆ ಎಂದರು.
ಕೇಂದ್ರ ಹಿಂ.ವರ್ಗಗಳ ಆಯೋಗ ಒಂದು ಭಾಗ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮತ್ತೊಂದು ಭಾಗ. ಹಿಂದುಳಿದ ವರ್ಗಗಳ ಪಟ್ಟಿ ಮಾಡುವ ವೇಳೆ ರಾಜ್ಯಪಾಲರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪುಟ್ಟಸ್ವಾಮಿ ಇದೇ ವೇಳೆ ಸ್ಪಷ್ಟಣೆ ನೀಡಿದರು. ಮೋರ್ಚಾ ಉಪಾಧ್ಯಕ್ಷ ಎಲ್.ಕೆ.ರಾಜು, ಎಚ್.ಆರ್.ಸತೀಶ್, ಕಾರ್ಯದರ್ಶಿ ತಿಪ್ಪೇಸ್ವಾಮಿ ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.