×
Ad

ಶಿಕ್ಷಕರ ನೇಮಕಾತಿಯಲ್ಲಿ ಅಂಗವಿಕಲರಿಗೆ ಸೂಕ್ತ ಮೀಸಲಾತಿ ಕಲ್ಪಿಸಿಲ್ಲ: ವಿವರಣೆ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2017-07-10 20:30 IST

ಬೆಂಗಳೂರು, ಜು.10: ಶಿಕ್ಷಣ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಅಂಗವಿಕಲರಿಗೆ ಸೂಕ್ತ ಮೀಸಲು ಕಲ್ಪಿಸುವ ಸಂಬಂಧ ವಿವರಣೆ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಅಲ್ಲದೆ, ನೋಟಿಸ್‌ನ್ನು ಜಾರಿ ಮಾಡಿದೆ.

ಈ ಸಂಬಂಧ ಸುರೇಶ್ ಮಲ್ಲಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ನ್ಯಾಯಮೂರ್ತಿ ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಶಿಕ್ಷಕರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇ.5ರಷ್ಟು ಮೀಸಲಾತಿ ಒದಗಿಸಲಾಗಿದೆ. ಆದರೆ, ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಜಾರಿಗೆ ಬಂದಾಗಿನಿಂದಲೂ ಅಂಗವಿಕಲರಿಗೆ ಸರಿಯಾಗಿ ಮೀಸಲಾತಿಯನ್ನು ಕಲ್ಪಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಅಲ್ಲದೆ, ಅಂಗವಿಕಲ ಮೀಸಲು ನೀಡಬೇಕಾದ ಶಿಕ್ಷಕರ ಹುದ್ದೆಗಳ ಸಂಖ್ಯೆಯನ್ನು ಲೆಕ್ಕ ಮಾಡಿ ಹಿಂಬಾಕಿ ಹುದ್ದೆಗಳನ್ನು ಪರಿಗಣಿಸಿ ಭರ್ತಿ ಮಾಡಲು ನ್ಯಾಯಪೀಠವು ಆದೇಶ ಹೊರಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಂಗವಿಕಲರಿಗೆ ಸೂಕ್ತ ಮೀಸಲು ಕಲ್ಪಿಸುವ ಸಂಬಂಧ ವಿವರಣೆ ನೀಡಲು ಸೂಚಿಸಿದೆ. ಅಲ್ಲದೆ, ನೋಟಿಸ್‌ನ್ನೂ ಜಾರಿ ಮಾಡಿದೆ. 


  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News