×
Ad

ಜಾಮೀನು ಷರತ್ತು ಸಡಿಲಿಕೆಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2017-07-10 20:35 IST

ಬೆಂಗಳೂರು, ಜು.10: ವಿದೇಶಕ್ಕೆ ತೆರಳಲು ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಬಳ್ಳಾರಿ ಅಕ್ರಮ ಗಣಿ ಪ್ರಕರಣದ ಆರೋಪಿ ನಿವೃತ್ತ ಅರಣ್ಯಾಧಿಕಾರಿ ಟಿ.ವಿ. ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಈ ಸಂಬಂಧ ಅಮೆರಿಕಾದಲ್ಲಿ ತಮ್ಮ ಮಗಳು ವಾಸಿಸುತ್ತಿದ್ದು, ಕಾರ್ಯನಿಮಿತ್ತ ತೆರಳಬೇಕಿರುವ ಸಲುವಾಗಿ ನಿಗದಿತ ಅವಧಿಗೆ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯಪೀಠ ನಡೆಸಿತು.

ವಿಚಾರಣೆ ವೇಳೆ ಎಸ್‌ಐಟಿ ಪರ ವಿಶೇಷ ಅಭಿಯೋಜಕ ಪಿ. ಗೋವಿಂದನ್ ವಾದಿಸಿ, ಅಕ್ರಮ ಗಣಿ ಪ್ರಕರಣಗಳನ್ನು ಶೀಘ್ರ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆಯಿದೆ. ಒಂದೊಮ್ಮೆ ಆರೋಪಿ ಅಧಿಕಾರಿ ವಿದೇಶಕ್ಕೆ ತೆರಳಿದರೆ, ತನಿಖೆಗೆ ತೊಂದರೆಯಾಗಲಿದೆ. ಅಲ್ಲದೆ ಅಧಿಕಾರಿ ವಾಪಾಸ್ ಬರದಿರುವ ಸಾಧ್ಯತೆಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಅರ್ಜಿದಾರ ಆರೋಪಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಟಿ.ವಿ. ಶ್ರೀನಿವಾಸನ್‌ಗೆ ವಿದೇಶಕ್ಕೆ ತೆರಳಲು ಜಾಮೀನು ಷರತ್ತುಗಳನ್ನು ಸಡಿಲಿಸಲು ನಿರಾಕರಿಸಿ ಅರ್ಜಿ ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News