ಜು.17ರಂದು ರಾಷ್ಟ್ರಪತಿ ಚುನಾವಣೆ: ಎಸ್.ಮೂರ್ತಿ
ಬೆಂಗಳೂರು, ಜು.10: ರಾಷ್ಟ್ರಪತಿ ಸ್ಥಾನಕ್ಕೆ ಜು.17ರಂದು ಚುನಾವಣೆ ನಡೆಯಲಿದ್ದು, ಭಾರತೀಯ ಚುನಾವಣಾ ಆಯೋಗವು ನನ್ನನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಶಾಸಕರಿಗೆ ಮತದಾನದ ಹಕ್ಕು ಇದೆ. ಆದರೆ, ಸರಕಾರದಿಂದ ನಾಮ ನಿರ್ದೇಶನಗೊಂಡಿರುವ ಆಂಗ್ಲೋ ಇಂಡಿಯನ್ ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿಲ್ಲ ಎಂದರು.
ಈಗಾಗಲೆ ಶಾಸಕರಿಗೆ ಮತದಾನದ ಬಗ್ಗೆ ಮಾಹಿತಿ ನೀಡಿದ್ದೇನೆ. ಮೂರು ಪಕ್ಷಗಳ ಮುಖ್ಯ ಸಚೇತಕರಿಗೆ ಪತ್ರ ಬರೆದಿದ್ದೇವೆ. ಅವರ ಪಕ್ಷದ ಸದಸ್ಯರು ಮತ ಚಲಾಯಿಸುವಂತೆ ನೋಡಿಕೊಳ್ಳುವಂತೆ ಪತ್ರ ರವಾನೆ ಮಾಡಲಾಗಿದೆ ಎಂದು ಮೂರ್ತಿ ತಿಳಿಸಿದರು.
ಜು.17ರಂದು ವಿಧಾನಸೌಧದಲ್ಲಿ ಮತದಾನ ನಡೆಯಲಿದೆ. ಅದಕ್ಕಾಗಿ ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದೇವೆ. ಬ್ಯಾಲೆಟ್ ಮತದಾನ ಪದ್ಧತಿ ನಡೆಯಲಿದೆ. ಬೇರೆ ರಾಜ್ಯಗಳ ಶಾಸಕರು ಇಲ್ಲಿ ಮತದಾನ ಮಾಡಬಹುದು. ನಮ್ಮ ಶಾಸಕರು ಬೇರೆ ರಾಜ್ಯಗಳಲ್ಲೂ ಮತದಾನ ಮಾಡಬಹುದು. ಈ ಬಗ್ಗೆ ಅವರು ನಮಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ನಮ್ಮ ಶಾಸಕರ ಒಂದು ಮತದ ಮೌಲ್ಯ 131, ನಮ್ಮ ಸಂಸದರ ಮತದ ವೌಲ್ಯ 705. ಬೇರೆ ರಾಜ್ಯಗಳ ಶಾಸಕರ ಮತದ ಮೌಲ್ಯ ಭಿನ್ನವಾಗಿರಲಿದೆ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಅವಶ್ಯಕತೆಯಿಲ್ಲ ಎಂದು ಮೂರ್ತಿ ಸ್ಪಷ್ಟಣೆ ನೀಡಿದರು.