ಎಸಿಬಿ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು, ಜು.10: ಬಿಬಿಎಂಪಿ ಹೆಚ್ಚುವರಿ ಆಯುಕ್ತ ಯತೀಶ್ ಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ.
ಈ ಸಂಬಂಧ ಯತೀಶ್ ಕುಮಾರ್ ಸಲ್ಲಿಸಿದ್ದ ಪ್ರಕರಣ ರದ್ದು ಹಾಗೂ ಎಸಿಬಿ ತನಿಖೆಗೆ ತಡೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ, ಹೆಚ್ಚುವರಿ ಆಯುಕ್ತ ಯತೀಶ್ ಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಎಸಿಬಿ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಹೀಗಾಗಿ, ಹೈಕೋರ್ಟ್‌ನಲ್ಲೂ ತಡೆ ನೀಡಬೇಕು. ಹಾಗೂ ಪ್ರಕರಣವನ್ನು ರದ್ದುಗೊಳಿಸಲು ಆದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಎಸಿಬಿ ಪರ ವಾದಿಸಿದ ವಕೀಲ ಜಗದೀಶ್ ಅವರು, ಯತೀಶ್‌ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ನೇತೃತ್ವದ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಆದರೆ, ಈಗ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ, ತನಿಖೆಗೆ ತಡೆ ನೀಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು.