ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಕರಾವಳಿಯಲ್ಲಿ ಎನ್‌ಐಎ ಕಚೇರಿ
Update: 2017-07-11 17:42 IST
ಬೆಂಗಳೂರು,ಜು.11: ಕರಾವಳಿಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ತಕ್ಷಣವೇ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಕಚೇರಿಯನ್ನು ಸ್ಥಾಪಿಸುವಂತೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಂಗಳೂರು, ಉಡುಪಿ, ಕಾರವಾರ, ಕಾಸರಗೋಡು ಸೇರಿ ಕರಾವಳಿ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಎನ್‌ಐಎ ಅಗತ್ಯವಿದೆ. ತಕ್ಷಣವೇ ಮಂಗಳೂರಿನಲ್ಲಿ ಒಂದು ಕಚೇರಿಯನ್ನು ಪ್ರಾರಂಭಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕೆಂದರು.
ಎನ್‌ಐಎ ಕಚೇರಿ ಆರಂಭವಾದರೆ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವವರನ್ನು ನಿಗ್ರಹಿಸಲು ಅನುಕೂಲವಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.