×
Ad

ಸಾಮಾಜಿಕ ನ್ಯಾಯದ ಪ್ರತಿಪಾದಕರು ಬಿಜೆಪಿಗೆ ಹೋಗಲ್ಲ: ಮುಖ್ಯಮಂತ್ರಿ

Update: 2017-07-11 19:47 IST

ಕಲಬುರಗಿ, ಜು.11: ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿದ್ದ ಬಸವಣ್ಣನ ಅನುಯಾಯಿಗಳು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಆಯೋಜಿಸಲಾಗಿದ್ದ ಕಲಬುರಗಿ ವಿಭಾಗ ಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಪ್ರತಿಪಾದಿಸಿದ ವಿಚಾರಧಾರೆಯಲ್ಲಿ ಬದ್ಧತೆ ಇಟ್ಟುಕೊಂಡಿರುವ ಪಕ್ಷ ಕಾಂಗ್ರೆಸ್ ಮಾತ್ರ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ನಮ್ಮ ಅಪ್ಪನಾಣೆಗೂ ಅವರಿಬ್ಬರೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ್ದ 160 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೂ, ಜಗದೀಶ್ ಶೆಟ್ಟರ್, ಅನಂತ್‌ಕುಮಾರ್, ಯಡಿಯೂರಪ್ಪ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಸರಕಾರದ ವಿರುದ್ಧ ಪ್ರತಿನಿತ್ಯ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಈ ಹಿಂದೆ ಇಂಡಿಯಾ ಶೈನಿಂಗ್ ಎಂದು ಹೇಳಿಕೊಂಡು ತಿರುಗುತ್ತಿತ್ತು. ಬಡವರು, ಮಹಿಳೆಯರು, ಕಾರ್ಮಿಕರು, ರೈತರು ಯಾರ ಶೈನಿಂಗ್ ಆಗಿದೆ. ಕೇವಲ ಕಾರ್ಪೊರೇಟ್ ಉದ್ಯಮಿಗಳ ಶೈನಿಂಗ್ ಆಗಿರಬಹುದು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಸಚಿವರಾದ ಡಿ.ಕೆ.ಶಿವಕುಮಾರ್, ಡಾ.ಶರಣಪ್ರಕಾಶ್‌ಪಾಟೀಲ್, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News