ವಾರ್ತಾ ಇಲಾಖೆ ಸುಧಾರಣೆಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ
ಬೆಂಗಳೂರು, ಜು. 13: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪುನರ್‌ರಚಿಸಲು ಮತ್ತು ಸುಧಾರಣೆಗಳನ್ನು ತರಲು ಇಲಾಖೆಯ ಪುನರ್ ರಚನೆ ಸಮಿತಿ ಹತ್ತು ಅಧ್ಯಾಯಗಳಿರುವ ಒಟ್ಟು 120 ಪುಟಗಳ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ್ಷ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅವರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತು.ಇಲಾಖೆ ಪ್ರಸ್ತುತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹಾಗೂ ಸರಕಾರದ ಯೋಜನೆಗಳ ವಿವರಗಳನ್ನು ಜನರಲ್ಲಿ ಅರಿವು ಮೂಡಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ವಾರ್ತಾ ಇಲಾಖೆಯ ಅನುದಾನ ಕಡಿಮೆ ಇದೆ. ಹೆಚ್ಚಿನ ಅನುದಾನ ನೀಡಲು ವರದಿಯಲ್ಲಿ ಪ್ರಸ್ತಾವನೆ ಇದ್ದರೆ ಹೆಚ್ಚಿನ ಅನುದಾನ ನೀಡಲು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಮಾತನಾಡಿ, ಇಲಾಖೆಯಲ್ಲಿನ ಲಭ್ಯವಿರುವ ಮಾನವ ಸಂಪನ್ಮೂಲದಲ್ಲಿ ಇಂದಿನ ತಾಂತ್ರಿಕತೆಯನ್ನು ಬಳಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಇಲಾಖೆ ಕೇಂದ್ರ ಸರಕಾರದ ಪಿಐಬಿ ಮಾದರಿಯಲ್ಲಿ ಸರಕಾರದ ಪ್ರತಿ ಇಲಾಖೆಯ ಕಾರ್ಯಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ತಿಳಿಸಿದರು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯದ ಪತ್ರಕರ್ತರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ರಾಜ್ಯದ ಸುದ್ದಿಗಳಿಗೆ ಮಹತ್ವ ನೀಡಲು ದೆಹಲಿಯಲ್ಲಿ ಕರ್ನಾಟಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.
ಈ ವೇಳೆ ಸಮಿತಿಯ ಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ಹಿರಿಯ ಪತ್ರಕರ್ತ ರಾಜಾಶೈಲೇಶ್‌ಚಂದ್ರ ಗುಪ್ತ, ಪತ್ರಕರ್ತರಾದ ಇಸ್ಮಾಯಿಲ್, ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜಂಟಿ ನಿರ್ದೇಶಕರಾದ ಎಚ್.ಬಿ.ದಿನೇಶ್, ಎ.ಆರ್.ಪ್ರಕಾಶ್ ಸೇರಿದಂತೆ ಇತರರು ಇದ್ದರು.