×
Ad

ಅರವಿಂದ ಲಿಂಬಾವಳಿ ಲಂಚ ಆರೋಪ ನಿರಾಧಾರ: ಮಾಜಿ ಡಿಸಿಪಿ ತಿಮ್ಮಪ್ಪ

Update: 2017-07-12 18:49 IST

ಬೆಂಗಳೂರು, ಜು. 12: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ 2 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂದು ತಮ್ಮ ವಿರುದ್ಧ ಬಿಜೆಪಿಯ ಉಚ್ಛಾಟಿತ ಸದಸ್ಯ ವೆಂಕಟೇಶ್ ವೌರ್ಯ ಮಾಡಿರುವ ಆರೋಪ ನಿರಾಧಾರ ಎಂದು ನಿವೃತ್ತ ಡಿಸಿಪಿ ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದ ಜಸ್ಮಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಂಕಟೇಶ್  ಮೌರ್ಯ ಅವರು ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡಿರುವ ಹತಾಶೆಯಲ್ಲಿ ಭೋವಿ ಸಮುದಾಯದ ನಾಯಕರ ತೇಜೋವಧೆ ಮಾಡಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

2009ರಲ್ಲಿ ಬಿಜೆಪಿಯಿಂದ ಚಿತ್ರದುರ್ಗದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಈ ಸಂಬಂಧ ಸಮಾಜದ ಹಿರಿಯ ಮುಖಂಡರು ಆಗಿರುವ ಅರವಿಂದ ಲಿಂಬಾವಳಿ ಬಳಿ ಟಿಕೆಟ್ ಕೊಡಿಸುವಂತೆ ಸಮಾಜದ ಹಲವು ಮುಖಂಡರುಗಳು ಮನವಿ ಮಾಡಿದರು. ಆದರೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಿಲ್ಲ. ಈ ರೀತಿಯ ಆರೋಪಗಳು ಆಧಾರ ರಹಿತವಾದದ್ದು ಎಂದು ಹೇಳಿದರು.

ಭಾರತೀಯ ಭೋವಿ ಜನಾಂಗ ಪರಿಷತ್‌ನ ಕಾರ್ಯಾಧ್ಯಕ್ಷ ಎಚ್.ರವಿ ಮಾಕಳಿ ಮಾತನಾಡಿ, ವಿನಾಕಾರಣ ಅರವಿಂದ ಲಿಂಬಾವಳಿ ಅವರ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ಸಮಾಜದ ಹಲವು ನಾಯಕರ ವಿರುದ್ಧ ಮಾಡಿರುವ ಇಲ್ಲಸಲ್ಲದ ಆರೋಪದ ಹಿನ್ನೆಲೆಯಲ್ಲಿ ವೆಂಕಟೇಶ್ ಮೌರ್ಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಮೇಲೆ ವೆಂಕಟೇಶ್ ಸಹಚರರೇ ಹಲ್ಲೆ ಮಾಡಲು ಮುಂದಾಗಿದ್ದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು. ಲಿಂಬಾವಳಿ ಅವರ ವಿರುದ್ಧ ಮಾಡಿರುವ ಆರೋಪವನ್ನು ಹಿಂಪಡೆದು ಕೂಡಲೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಮುನಿಮಾರಪ್ಪ, ಯಲ್ಲಪ್ಪ, ಜಂಟಿ ಕಾರ್ಯದರ್ಶಿ ಶ್ರೀನಿವಾಸ್‌ಮೂರ್ತಿ, ದಕ್ಷಿಣ ಭಾರತ ಅಧ್ಯಕ್ಷ ಚಂದ್ರಪ್ಪ, ರಾಜ್ಯ ಯುವ ಅಧ್ಯಕ್ಷ ಮುರುಗೇಶ್, ಮುಖಂಡರಾದ ಛಲಪತಿ ಸೇರಿದಂತೆ ಇತರರು ಇದ್ದರು.ಅರವಿಂದ ಲಿಂಬಾವಳಿ ಲಂಚ ಆರೋಪ ನಿರಾಧಾರ: ಮಾಜಿ ಡಿಸಿಪಿ ತಿಮ್ಮಪ್ಪ
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News