ಸಿರಿಮನೆ ನಾಗರಾಜ್ ಸೇರಿ ಹಲವರ ಬಂಧನ, ಬಿಡುಗಡೆ
ಗುಜರಾತ್, ಜು.12: ಗುಜರಾತಿನ ‘ಊನಾ’ ಕ್ರೌರ್ಯಕ್ಕೆ ಒಂದು ವರ್ಷದವಾದ ಹಿನ್ನೆಲೆಯಲ್ಲಿ ಇಲ್ಲಿನ ಮೆಹಸಾಣಾದ ಸೋಮನಾಥ್ ಚೌಕದಿಂದ ಏರ್ಪಡಿಸಿದ್ದ ‘ದಲಿತ ಶಕ್ತಿ’ ಜಾಥಾಕ್ಕೆ ತೆರಳಿದ್ದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಸಿರಿಮನೆ ನಾಗರಾಜ್, ದಲಿತ ದಮನಿತರು ಸ್ವಾಭಿಮಾನಿ ಹೋರಾಟ ಸಮಿತಿಯ ಗೌರಿ ಸೇರಿದಂತೆ ನೂರುಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
‘ನಮಗೆ ಬೇಕು ಸ್ವಾತಂತ್ರ, ಪಡೆದೇ ತೀರುತ್ತೇವೆ ಸ್ವಾತಂತ್ರ’ ಎಂಬ ಘೋಷಣೆಯಡಿ ಇಲ್ಲಿನ ಊನಾದ ಸೋಮನಾಥ ಚೌಕದಿಂದ ಏರ್ಪಡಿಸಿದ್ದ ಜಾಥಾಕ್ಕೆ ಮೊದಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಬಳಿಕ ಹಿಂಪಡೆದಿತ್ತು. ಆ ಹಿನ್ನೆಲೆಯಲ್ಲಿ ಜಾಥಾ ನೇತೃತ್ವ ವಹಿಸಿದ್ದ ಜಿಗ್ನೇಶ್ ಮೆವಾನಿ ಸೇರಿದಂತೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಆರಂಭದಲ್ಲೆ ಮೂರು ಗಂಟೆಗಳ ಕಾಲ ಅತ್ಯಂತ ಸ್ಫೂರ್ತಿಯುತವಾಗಿ ಬಹಿರಂಗ ಸಭೆಯನ್ನು ನಡೆಸಲಾಯಿತು. ಕನ್ಹಯ್ಯ ಕುಮಾರ್, ಜಿಗ್ನೇಶ್, ಯೋಗೇಂದ್ರ ಯಾದವ್, ಸಿರಿಮನೆ ನಾಗರಾಜ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದ ಜಾಥಾ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದುವರಿದಾಗ ಪೊಲೀಸರು ತಡೆದು ಎಲ್ಲರನ್ನೂ ಬಂಧಿಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಮತ್ತು ಗುಜರಾತಿನ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೈ ಭೀಮ್, ಇನ್ಕ್ವಿಲಾಬ್ ಜಿಂದಾಬಾದ್, ಕೋಮುವಾದ, ಜಾತಿವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕತರರು, ‘ಮೋದೀರಾಜ್ ಹೋ ಬರ್ಬಾದ್, ಜುಮಲೇಬಾಜೀ ಕೀ ಸರಕಾರ್ ನಹೀ ಚಲೇಗೀ.. ನಹೀ ಚಲೇಗೀ.. ಘೋಷಣೆಗಳು ಮುಗಿಲು ಮುಟ್ಟಿದವು.
ಜಾಥಾದಲ್ಲಿ ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ಜೊತೆ ಎಲ್ಲ ದಲಿತ, ಹಿಂದುಳಿದ ವರ್ಗ, ಮುಸ್ಲಿಂ ಹಾಗೂ ಪಾಟೀದಾರ್ ಸಂಘ (ಗುಜರಾತಿ ಪಟೇಲರ ಸಂಘಟನೆ) ಕೈ ಕೂಡಿಸಿದ್ದವು. ಕನ್ಹಯ್ಯ ಕುಮಾರ್‌ಗೆ ಗುಜರಾತಿಗೆ ಕಾಲಿಡಲು ಬಿಡುವುದಿಲ್ಲ ಎನ್ನುತ್ತಿದ್ದ ಗುಜರಾತ್ ಸರಕಾರಕ್ಕೆ ದಲಿತ ಶಕ್ತಿ ಜಾಥಾದ ಮೂಲಕ ತಿರುಗೇಟು ನೀಡಲಾತು ಎಂದು ಮುಖಂಡರು ತಿಳಿಸಿದ್ದಾರೆ.