ಎಸ್‌ಪಿಬಿ-ಜಯಮಾಲಾಗೆ ಎನ್‌ಟಿಆರ್ ಪುರಸ್ಕಾರ
ಬೆಂಗಳೂರು, ಜು.12: ತೆಲುಗು ಅಕಾಡೆಮಿ ವತಿಯಿಂದ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ನಟಿ ಜಯಮಾಲ ಅವರಿಗೆ ‘ಡಾ.ಎನ್. ಟಿ.ಆರ್.ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಸಮಾರಂಭವನ್ನು ಜು.15 ರಂದು ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಆರ್.ವಿ.ಹರೀಶ್, ಚಿತ್ರರಂಗದಲ್ಲಿ ಅಪಾರವಾದ ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಮೂಲಕ ಕನ್ನಡ ಮತ್ತು ತೆಲುಗು ಭಾಷೆಗಳ ಸೌಹಾರ್ಧ ಸಂಬಂಧ ದೃಢವಾಗಿ ಮುಂದುವರಿಯುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಚಿವ ಎಂ.ಕೃಷ್ಣಪ್ಪ, ಶಾಸಕ ಆರ್.ಅಶೋಕ್, ವಿಧಾನಪರಿಷತ್ತು ಸದಸ್ಯ ತೂಪಲ್ಲಿ ಚೌಡರೆಡ್ಡಿ, ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ.ಎ.ರಾಧಾಕೃಷ್ಣರಾಜು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.