ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗದೆ ಪ್ರಗತಿ ಸಾಧ್ಯವಿಲ್ಲ: ಜಿ.ರಾಮಕೃಷ್ಣ
ಬೆಂಗಲೂರು, ಜು.12: ರಾಜ್ಯದ ಶಿಕ್ಷಣ ವ್ಯವಸ್ಥೆ ಕುಬ್ಜಗೊಳ್ಳುತ್ತಿದ್ದು, ವೃತ್ತಿಪರ ಶಿಕ್ಷಣವನ್ನು ಹೊರತು ಪಡಿಸಿ ಮತ್ತೇನು ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಣ ತಜ್ಞ ಜಿ.ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.
ಬುಧವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ‘ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ’ದಲ್ಲಿ ‘ಸಮಕಾಲೀನ ಶಿಕ್ಷಣದ ಸವಾಲುಗಳು ಮತ್ತು ಪರಿಹಾರಗಳು’ ವಿಷಯದ ಕುರಿತು ಅವರು ಮಾತನಾಡಿದರು.
ವಿಜ್ಞಾನ ಕ್ಷೇತ್ರವೆಂದರೆ ಕೇವಲ ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ, ಎಂಜಿನಿಯರಿಂಗ್ ಮಾತ್ರ ಎನ್ನುವಂತಾಗಿದೆ. ವಿಜ್ಞಾನದಲ್ಲಿ ಎಂಎಸ್ಸಿ, ಸಂಶೋಧನೆ ಮಾಡುವವರು ದಡ್ಡರೆಂದು ಪರಿಗಣಿಸುವಂತಾಗಿದೆ. ಹಾಗೆಯೇ ಕಲಾ, ವಾಣಿಜ್ಯ ವಿಷಯದಲ್ಲೂ ಕೇವಲ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ಶಿಕ್ಷಣವೆಂದರೆ ವಿದ್ಯಾರ್ಥಿಯೋರ್ವನ ಬದುಕನ್ನು ಸೃಜನಾತ್ಮಕವಾಗಿ, ಮೌಲ್ಯಯುತವಾಗಿ ರೂಪಿಸುವುದಾಗಿದೆ. ಹಾಗೂ ತಾವು ಓದುತ್ತಿರುವ ವಿಷಯದ ಕುರಿತು ವಿಸ್ತಾರವಾಗಿ ಹಾಗೂ ವೈಜ್ಞಾನಿಕವಾಗಿ ಚಿಂತಿಸುವುದಾಗಿದೆ. ಆದರೆ, ಈಗಿನ ಶಿಕ್ಷಣ ಕೇವಲ ಪರೀಕ್ಷೆ ಹಾಗೂ ಕಂಪೆನಿಗಳಿಗೆ ಬೇಕಾದ ಉದ್ಯೋಗಿಗಳನ್ನು ಸೃಷ್ಟಿಸುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜು ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಸೌಲಭ್ಯಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಆದರೆ, ಸಿಇಟಿ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾತ್ರ ಸಮಾನತೆ ಇದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಲ್ಲದರಲ್ಲೂ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗದೆ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸರಕಾರ ಹಾಗೂ ಅಧಿಕಾರಿವರ್ಗ ಗಂಭೀರವಾಗಿ ಚಿಂತಿಸಬೇಕು. ರಾಜ್ಯದಲ್ಲಿರುವ ಎಲ್ಲ ವರ್ಗದ ಮಕ್ಕಳಿಗೂ ಒಂದು ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಿದಾಗ ಮಾತ್ರ ಶಿಕ್ಷಣ ಕ್ಷೇತ್ರ ಪ್ರಗತಿಯತ್ತ ಸಾಗಿ ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.