×
Ad

ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ: ಸಚಿವ ಡಿ.ಕೆ.ಶಿವಕುಮಾರ್

Update: 2017-07-12 19:36 IST

ಬೆಂಗಳೂರು, ಜು. 12: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದರೂ, ರೈತರು, ಕೈಗಾರಿಕೆಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಬ್ರಿಟಿಷ್ ಡೆಪ್ಯೂಟಿ ಹೈ ಕಮೀಷನರ್ ಡಾಮನಿಕ್ ಮ್ಯಾಕ್‌ಅಲಿಸ್ಟರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪ್ರತಿನಿತ್ಯ 8300ಮೆ.ವ್ಯಾಟ್‌ನಿಂದ 9300ಮೆ.ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ. ಆದರೂ ಕೈಗಾರಿಕೆಗಳು, ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಕುಮಾರ್ ಇದೇ ವೇಳೆ ತಿಳಿಸಿದರು.

ಕಲ್ಲಿದ್ದಲು ಹಂಚಿಕೆ: ಛತ್ತಿಸ್‌ಘಡ್‌ದಲ್ಲಿ ಕರ್ನಾಟಕ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡುವುದು ಎಂದು ಕೇಂದ್ರ ಇಂಧನ ಸಚಿವರು ಭರವಸೆ ನೀಡಿದ್ದು, ಇದರಿಂದ ರಾಜ್ಯದ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಗ್ರಾಹಕರಿಗೆ ಎಲ್‌ಇಡಿ ಬಲ್ಬ್‌ಗಳನ್ನು ಸರಬರಾಜು ಮಾಡುವುದನ್ನು ಕೇಂದ್ರ ಸರಕಾರ ನಿಲ್ಲಿಸಲಾಗಿದ್ದು, ಕೇಂದ್ರ, ರಾಜ್ಯಕ್ಕೆ ಪೂರೈಕೆ ಮಾಡಬೇಕಾದ ಎಲ್‌ಇಡಿ ಬಲ್ಬ್‌ಗಳನ್ನು ಸರಬರಾಜು ಮಾಡಿದಲ್ಲಿ ಕೂಡಲೇ ಗ್ರಾಹಕರಿಗೆ ಎಲ್‌ಇಡಿ ಬಲ್ಬ್‌ಗಳನ್ನು ಒದಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಸ್ಪಷ್ಟಣೆ ನೀಡಿದರು.

ಸ್ಮಾರ್ಟ್ ಮೀಟರ್ ಅಳವಡಿಕೆಗೆ ನೆರವು: ಬ್ರಿಟಿಷ್ ಡೆಪ್ಯೂಟಿ ಹೈ ಕಮೀಷನ್ ಡಾಮನಿಕ್ ಮ್ಯಾಕ್ ಅಲಿಸ್ಟರ್, ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಸ್ತಾವನೆಗಳನ್ನು ರಾಜ್ಯದ ಮುಂದಿಟ್ಟಿದ್ದಾರೆ. ತಂತ್ರಜ್ಞಾನ, ಆರ್ಥಿಕ ನೆರವು ಸೇರಿದಂತೆ ಹಲವು ರೀತಿಯ ಸಹಕಾರ-ಬೆಂಬಲ ನೀಡಲು ಉತ್ಸುಕರಾಗಿದ್ದಾರೆ ಎಂದರು.
ಮೈಸೂರಿನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಾರಂಭಿಸಿರುವಂತೆ ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಮೇಲ್ಚಾವಣಿ ಮೇಲಿನ ವಿದ್ಯುತ್ ಉತ್ಪಾದನೆ, ವಿದ್ಯುತ್ ವಾಹನಗಳಿಗೆ ಆದ್ಯತೆ ಸೇರಿದಂತೆ ಹಲವು ಪ್ರಸ್ತಾವನೆಯನ್ನು ಬ್ರಿಟಿಷ್ ಡೆಪ್ಯೂಟಿ ಹೈ ಕಮೀಷನರ್ ಇಂದಿನ ಸಭೆಯಲ್ಲಿ ಪ್ರಸ್ತಾಪಿಸಿದರು.

ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಬ್ರಿಟಿಷ್ ಸರಕಾರ ನೆರವು ನೀಡುತ್ತಿದ್ದು, ಪಾವಗಡ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆ ಹಾಗೂ ಪವತ ವಿದ್ಯುತ್ ಉತ್ಪಾದನೆಗೆ ತಾಂತ್ರಿಕ ನೆರವು ನೀಡುತ್ತಿದೆ. ರಾಜ್ಯ ಸರಕಾರ ಹಾಗೂ ಬ್ರಿಟಿಷ್ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಮೇಕೆದಾಟುವಿನಲ್ಲಿ 200ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ 1 ಸಾವಿರ ಕೋಟಿ ರೂ.ಗಳ ಒಳಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಅನುಮೋದನೆ ಅಗತ್ಯವಿಲ್ಲ. ತಮಿಳುನಾಡಿಗೆ ಹರಿದು ಹೋಗುವ ನೀರನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಈ ಯೋಜನೆಗೆ ಭೂಸಾಧ್ವೀನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News