ಡಿಸೆಂಬರ್‌ನೊಳಗೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಹುದ್ದೆ ಭರ್ತಿ: ತನ್ವೀರ್ ಸೇಠ್
ಬೆಂಗಳೂರು, ಜು.12: ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲ ಹುದ್ದೆಗಳಿಗೆ ಮುಂದಿನ ಡಿಸೆಂಬರ್‌ನೊಳಗೆ ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಬುಧವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 1203 ಪದವಿ ಪೂರ್ವ ಕಾಲೇಜುಗಳಿವೆ. ಅವುಗಳಲ್ಲಿ 806 ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿಯಿತ್ತು. ಇವುಗಳಲ್ಲಿ ಸುಮಾರು 406 ಪ್ರಾಂಶುಪಾಲರ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಉಳಿದ ಹುದ್ದೆಗಳನ್ನು ಡಿಸೆಂಬರ್‌ನೊಳಗೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಇತಿಹಾಸದಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಂಡಿಲ್ಲ. ಆದರೆ, ನಮ್ಮ ಸರಕಾರ ಪ್ರಾಂಶುಪಾಲರ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಹೀಗಾಗಲೆ ಕೆಪಿಎಸ್ಸಿ ಮುಖಾಂತರ 100 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಹಾಗೆಯೇ 371ಜೆ ವಿಶೇಷ ಮೀಸಲಾತಿಯಡಿ 29 ಪ್ರಾಂಶುಪಾಲರ ಹುದ್ದೆಗಳನ್ನು ತುಂಬಲಾಗಿದೆ ಎಂದು ಅವರು ಹೇಳಿದರು.
ಪದವಿ ಪೂರ್ವ ಶಿಕ್ಷಕರಿಗೆ ಬಿಎಡ್ ಕಡ್ಡಾಯ: ಪದವಿ ಪೂರ್ವ ಶಿಕ್ಷಕರಿಗೆ ಬಿಎಡ್ ಕಡ್ಡಾಯಗೊಳಿಸಲಾಗಿದೆ. ಈಗಾಗಲೆ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರಾಗಿರುವವರಿಗೆ ಬಿಎಡ್ ಮಾಡಲು ವೇತನ ಸಹಿತ ರಜೆಯನ್ನು ಕೊಡಲಾಗಿದೆ. ಶಿಕ್ಷಕರು ಪದವಿ ಪೂರ್ವ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಖಾಯಮಾತಿ ಆಗಬೇಕಾದರೆ ಬಿಎಡ್ ಶಿಕ್ಷಣ ಕಡ್ಡಾಯವೆಂದು ಅವರು ಹೇಳಿದರು.
ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಯೋಜನೆ: ಕಳೆದ ವರ್ಷ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ ಯೋಜನೆಯ ಮೂಲಕ ವಿಶೇಷ ತರಗತಿಯನ್ನು ಏರ್ಪಡಿಸಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಎಲ್ಲ ವರ್ಗದ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಶಿಕ್ಷಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕಳೆದ ಮೇ ತಿಂಗಳಿನಲ್ಲಿಯೇ ಅನುಮೋದನೆ ಕೊಡಲಾಗಿದೆ. ಪ್ರಾಥಮಿಕ ಶಾಲೆ 16ಸಾವಿರ, ಪ್ರೌಢಶಾಲೆ 1500 ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2500 ಶಿಕ್ಷಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳದ ಅಧ್ಯಕ್ಷ ಶೇಖರ್‌ಗೌಡ ಮಾಲಿ ಪಾಟೀಲ್, ಶಿಕ್ಷಣ ತಜ್ಞ ಡಾ.ಜಿ.ರಾಮಕೃಷ್ಣ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸೇರಿದಂತೆ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.