ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ಅಪಹರಣ ಪ್ರಕರಣ: ಬಿಎಸ್‌ವೈ ಆಪ್ತ ಸಹಾಯಕನ ‘ರಾಸಲೀಲೆ’ ವಿಡಿಯೋ ಕಾರಣ?
ಬೆಂಗಳೂರು, ಜು.12: ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಎನ್ನಲಾದ ಸಂತೋಷ್ ಹಾಗೂ ರೂಪದರ್ಶಿಯೊಬ್ಬಳ ನಡುವಿನ ರಾಸಲೀಲೆ ವಿಡಿಯೋ ಕಾರಣದಿಂದಲೇ ಅಪಹರಣ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರೂಪದರ್ಶಿಯೊಬ್ಬಳ ಜೊತೆ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್‌ಗೆ ಸಂಬಂಧವಿತ್ತು. ಸಂತೋಷ್ ಜೊತೆಗಿನ ಕೆಲವೊಂದು ರಹಸ್ಯ ವಿಡಿಯೋ ಹಾಗೂ ವಾಟ್ಸಾಪ್ ಸಂದೇಶಗಳನ್ನು ರೂಪದರ್ಶಿ ಬಳಿಯಿದ್ದವು. ತದನಂತರ ಈಕೆ ವಿಡಿಯೋ ಮತ್ತು ಸಂದೇಶಗಳನ್ನು ಕೆ.ಎಸ್.ಈಶ್ವರಪ್ಪಸಹಾಯಕ ವಿನಯ್ಗೆ ನೀಡಿದ್ದಳು ಎನ್ನಲಾಗಿದೆ.
ಈ ವಿಚಾರ ತಿಳಿದ ಸಂತೋಷ್, ವಿನಯ್ನನ್ನು ಅಪಹರಣ ಮಾಡುವಂತೆ ಬಿಜೆಪಿ ಯುವ ಮೋರ್ಚಾ ಮುಖಂಡ ರಾಜೇಂದ್ರ ಅರಸ್‌ಗೆ ಸೂಚನೆ ನೀಡಿದ್ದ. ರಾಜೇಂದ್ರ ರೌಡಿಗಳನ್ನ ಸಂಪರ್ಕಿಸಿ ವಿನಯ್ನನ್ನು ಅಪಹರಿಸಿ, ಪೆನ್‌ಡ್ರೈವ್ ಮತ್ತು ಮೊಬೈಲ್ ಕಸಿದುಕೊಳ್ಳುವಂತೆ ಸೂಚಿಸಿದ್ದ ಎಂದು ಹೇಳಲಾಗುತ್ತಿದೆ.ವಿನಯ್‌ನನ್ನು ಅಪಹರಿಸಿ ನನ್ನ ಕೆಲಸ ಮುಗಿಸಿಕೊಟ್ಟರೆ, ಠಾಣೆಯಲ್ಲಿರುವ ರೌಡಿಪಟ್ಟಿ ತೆಗೆಸುವುದಾಗಿ ಸಂತೋಷ್ ಭರವಸೆ ನೀಡಿದ್ದ. ಹೀಗಾಗಿ, ಬಂಧಿತರು ಈ ಕೃತ್ಯವೆಸಗಲು ಮುಂದಾಗಿದ್ದರು ಎನ್ನಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಿಚಾರಣೆ: ಮಂಗಳವಾರ ಇಲ್ಲಿನ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ರಾಜೇಂದ್ರ ಅರಸ್ ವಿಚಾರಣೆ ನಡೆಸಲಾಯಿತು. ಅದೇ ರೀತಿ, ಬುಧವಾರ ಪುನಃ ಈಶ್ವರಪ್ಪ ಆಪ್ತ ಸಹಾಯಕ ಎಸ್.ವಿನಯ್‌ನನ್ನು ನಗರದ ಉತ್ತರ ವಿಭಾಗದ ಡಿಸಿಪಿ ಕಚೇರಿಯಲ್ಲಿ ವಿಚಾರಣೆ ನಡೆಸಿ, ಅಪಹರಣ ಸಂಬಂಧ ಹೇಳಿಕೆಗಳನ್ನು ಪಡೆಯಲಾಯಿತು.
ಏನಿದು ಪ್ರಕರಣ: ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ಎಸ್.ವಿನಯ್ ಅವರ ಕಾರನ್ನು ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡು ಪರಾರಿಯಾಗಿದ್ದರು.