ಶಾಸ್ತ್ರಿ ಆಯ್ಕೆಯಲ್ಲಿ ಸಿಎಸಿ ನಾಟಕ: ಪ್ರಸನ್ನ ಬೇಸರ

Update: 2017-07-13 18:53 GMT

ಕೋಲ್ಕತಾ, ಜು.13: ‘‘ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಯ್ಕೆ ಘೋಷಣೆ ವೇಳೆ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿದ್ದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ನಾಟಕವಾಡಿದ್ದನ್ನು ನೋಡಿ ತುಂಬಾ ಬೇಸರವಾಯಿತು’’ ಎಂದು ಭಾರತದ ಮಾಜಿ ಆಫ್ ಸ್ಪಿನ್ನರ್ ಎರ್ರಪಲ್ಲಿ ಪ್ರಸನ್ನ ಹೇಳಿದ್ದಾರೆ.

 ಮಂಗಳವಾರ ದೃಶ್ಯಮಾಧ್ಯಮದಲ್ಲಿ ಬಿತ್ತರವಾದ ಸುದ್ದಿಯಲ್ಲಿ ರವಿ ಶಾಸ್ತ್ರಿ ಭಾರತದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆಂದು ಪ್ರಕಟವಾಗಿತ್ತು. ಕೆಲವೇ ನಿಮಿಷದ ಬಳಿಕ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸುದ್ದಿಗೋಷ್ಠಿ ನಡೆಸಿ ಶಾಸ್ತ್ರಿ ಆಯ್ಕೆ ಸುದ್ದಿಯನ್ನು ಅಲ್ಲಗಳೆದಿದ್ದರು. ಅದೇ ದಿನ ರಾತ್ರಿ ಶಾಸ್ತ್ರಿಯವರನ್ನು ಅಧಿಕೃತವಾಗಿ ಕೋಚ್ ಆಗಿ ನೇಮಿಸುವ ಜೊತೆಗೆ ಝಹೀರ್ ಖಾನ್‌ರನ್ನು ಬೌಲಿಂಗ್ ಕೋಚ್ ಹಾಗೂ ರಾಹುಲ್ ದ್ರಾವಿಡ್‌ರನ್ನು ವಿದೇಶ ಪ್ರವಾಸದ ವೇಳೆ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ಸಿಎಸಿಯ ಗೊಂದಲಮಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರಸನ್ನ, ‘‘ಇಷ್ಟೇಲ್ಲಾ ನಾಟಕವಾಡುವ ಅಗತ್ಯವಿರಲಿಲ್ಲ. ಸಮಿತಿಯಲ್ಲಿರುವ ಮೂವರು ಸದಸ್ಯರು ಶಾಸ್ತ್ರಿ ಅವರ ಹೆಸರನ್ನು ನೇರವಾಗಿ ಹೇಳಬಹುದಿತ್ತು. ಅವರು ಕೋಚ್ ಹುದ್ದೆಗೆ ಮೊದಲ ಆಯ್ಕೆಯಾಗಿದ್ದರು’’ ಎಂದು ಹೇಳಿದ್ದಾರೆ.

ಸಿಎಸಿ ಕಾರ್ಯವೈಖರಿಯ ಬಗ್ಗೆ ನನಗೆ ಬೇಸರವಾಗಿದೆ. ಸಮಿತಿಯಲ್ಲಿ ಮೂವರು ಕ್ರಿಕೆಟ್ ದಂತಕತೆಗಳಿದ್ದಾರೆ. ಅವರು ಕೋಚ್ ನೇಮಕಕ್ಕೆ ಇನ್ನಷ್ಟು ಸಮಯ ತೆಗೆದುಕೊಳ್ಳಬೇಕಿತ್ತು. ನನಗೆ ತಿಳಿದ ಮಟ್ಟಿಗೆ ಇದೊಂದು ಒಮ್ಮತದ ನಿರ್ಧಾರವಾಗದೇ ಕೊನೆಯ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಪ್ರಸನ್ನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News