ಅಧಿಕಾರಿಗಳ ಕಚ್ಚಾಟ ‘ಆಡಳಿತ ದಿವಾಳಿ’ಗೆ ಸಾಕ್ಷಿ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜು. 14: ಪೊಲೀಸ್ ಇಲಾಖೆಯ ಅಧಿಕಾರಿಗಳಿಬ್ಬರ ವೈಯಕ್ತಿಕ ಕಚ್ಚಾಟದಿಂದ ಸರಕಾರದ ಆಡಳಿತ ಸಂಪೂರ್ಣ ದಿವಾಳಿಯಾಗಿದ್ದು, ಕೂಡಲೇ ಆ ಇಬ್ಬರು ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಮಾಧ್ಯಮಗಳ ಮುಂದೆ ಮಾತನಾಡಲು ಇಲಾಖೆ ಸೇವಾ ನಿಯಮದಲ್ಲಿ ಅವಕಾಶವಿಲ್ಲ. ಅದನ್ನು ಇಬ್ಬರು ಅಧಿಕಾರಿಗಳು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದರು.
ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್, ಡಿಐಜಿ ರೂಪಾ ಅವರು ಹಣದ ಹಂಚಿಕೆ ಕಾರಣಕ್ಕೆ ಪರಸ್ಪರ ರಾದ್ಧಾಂತ ಮಾಡಿಕೊಂಡಿದ್ದು, ಕಾರಾಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಶಶಿಕಲಾ ಅವರಿಂದ 2ಕೋಟಿ ರೂ. ಪಡೆದಿದ್ದು, ಪ್ರತಿ ತಿಂಗಳು 10ಲಕ್ಷ ರೂ. ಮಾಮೂಲಿಗೂ ಬೇಡಿಕೆ ಇಟ್ಟಿದ್ದರು ಎಂದು ಗೊತ್ತಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಅಧಿಕಾರಿಗಳ ಮೇಲೆ ಸರಕಾರಕ್ಕೆ ಹಿಡಿತವಿಲ್ಲ. ಹಣ ಮತ್ತು ಜಾತಿ ನೋಡಿ ಹುದ್ದೆಗಳನ್ನು ನೀಡಿದರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ಇಬ್ಬರು ಅಧಿಕಾರಿಗಳ ರಾದ್ಧಾಂತ ಸಾಕ್ಷಿಯಾಗಿದೆ ಎಂದ ಕುಮಾರಸ್ವಾಮಿ, ಸಚಿವ ಕೆ.ಜೆ.ಜಾರ್ಜ್ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಹಾಕಿಸಿ ಮತ್ತೆ ಅವರನ್ನು ಸಚಿವರನ್ನಾಗಿ ಮಾಡಿಕೊಂಡ ರೀತಿ ತನಿಖೆ ನಡೆಸದೆ, ಸಮರ್ಪಕ ತನಿಖೆ ನಡೆಸಬೇಕೆಂದು ಲೇವಡಿ ಮಾಡಿದರು.
ಐಎಎಸ್ ಅಧಿಕಾರಿ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅವರ ಮನೆಯಲ್ಲಿ 5ಕೋಟಿ ಹಣ ಸಿಕ್ಕಿತ್ತು. ಈಗ ಅದೇ ಅಧಿಕಾರಿಗೆ ‘ರೇರಾ’ ಕಾಯ್ದೆಯ ಉಸ್ತುವಾರಿಯನ್ನು ನೀಡಲಾಗಿದೆ. ಇದು ಸಿಎಂ ಸಿದ್ದರಾಮಯ್ಯ ಆಡಳಿತದ ಪಾರದರ್ಶಕತೆ ಎಂದು ಟೀಕಿಸಿದರು.
ಗೆಲುವು ಅಸಾಧ್ಯ: ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರಪ್ಪನಾಣೆಗೂ ಗೆಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಗೆಲ್ಲುವುದು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ಅವರು, ಮುಖ್ಯಮಂತ್ರಿ ಹೋದಲ್ಲಿ-ಬಂದಲ್ಲಿ ಏಕಪಾತ್ರಾಭಿನಯ ಮಾಡುವುದನ್ನು ಬಿಡಬೇಕು ಎಂದು ಸಲಹೆ ಮಾಡಿದರು.
ಉಪ ಚುನಾವಣೆ ಗೆದ್ದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ಗೆಲ್ಲಲಿ ಎಂದು ಸವಾಲು ಹಾಕಿದ ಅವರು, ಸಿದ್ದರಾಮಯ್ಯ ಅದು ಹೇಗೆ ಗೆಲ್ಲುತ್ತಾರೆಂದು ನಾನೂ ನೋಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.