ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ರಾಜೀನಾಮೆಗೆ ಆಮ್ ಆದ್ಮಿಪಕ್ಷ ಆಗ್ರಹ
ಬೆಂಗಳೂರು, ಜು.14: ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ನೇರವಾಗಿ ಭಾಗಿಯಾಗಿದ್ದು, ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಸಂಚಾಲಕ ಪೃಥ್ವಿರೆಡ್ಡಿ, ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗಸನಾಳ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಟೋಲ್ ಪ್ಲಾಜಾವನ್ನು ತಡೆಗುಂಡಿಗೆ ಸ್ಥಳಾಂತರಿಸುವ ಮೂಲಕ ಸಂಸದ ರಮೇಶ್ ಜಿಗಜಿಣಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಡೆಗುಂಡಿ ಬಳಿ ಟೋಲ್ ಪ್ಲಾಜಾ ನಿರ್ಮಿಸಲು ಸಾವಿರಾರು ರೈತರ ಜಮೀನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಜಿಗಜಿಣಗಿ ಅವರು ಪ್ರಾಧಿಕಾರಕ್ಕೆ ಪತ್ರ ಬರೆದು ಮಂಜುನಾಥ ಟಿ.ಪಾಟೀಲ್ ಮತ್ತು ಸಂಜಯ್ ಬಿಟಗಿ ಕುಟುಂಬದ ಜಮೀನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಈ ಎರಡೂ ಕುಟುಂಬದ ಜಮೀನಿಗೆ 30ರಿಂದ40 ಕೋಟಿ ರೂ.ಗಳಷ್ಟು ಪರಿಹಾರ ಕೊಡಿಸಿದ್ದಾರೆ. ನೂರಾರು ರೈತರ ಜಮೀನು ಸ್ವಾಧೀನಕ್ಕೆ ಒಳಗಾಗಿದ್ದರೂ ಈ ಎರಡು ಕುಟುಂಬಗಳಿಗೆ ಮಾತ್ರ ದುಬಾರಿ ಪರಿಹಾರ ಕೊಡಿಸುವ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಗಜಣಗಿ ನಡುವೆ ನಡೆದಿರುವ ಪತ್ರ ವ್ಯವಹಾರದಲ್ಲಿ ಪ್ರತಿ ಪತ್ರದಲ್ಲೀ ‘ವಿಐಪಿ’ ರೆಫರೆನ್ಸ್ ಎಂದು ನಮೂದಿಸಲಾಗಿದೆ. ಹಾಗಾಗಿ ಪ್ರಾಧಿಕಾರದವರು ಈ ಎರಡು ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿದ್ದಾರೆ. ಈ ಹೆಚ್ಚಿನ ಪರಿಹಾರ ಪಡೆದಿರುವವರು ಜಿಗಜಿಣಗಿ ಅವರ ಆಪ್ತರು. ಅವರು ಮೂಲದಲ್ಲಿ ರೈತರಲ್ಲ. ಅಗಸನಾಳ ಬಳಿ ಟೋಲ್ ಪ್ಲಾಜಾ ನಿರ್ಮಿಸುವ ಪ್ರಸ್ತಾವನೆ ಇದ್ದಾಗಲೇ ಈ ಎರಡು ಕುಟುಂಬದವರು ತಮ್ಮ ಹೆಂಡತಿ, ಮಕ್ಕಳ ಹೆಸರಿನಲ್ಲಿ ತಡೆಗುಂಡಿ ಬಳಿ ರೈತರ ಬಳಿ ಕಡಿಮೆ ದರಕ್ಕೆ ಜಮೀನು ಖರೀದಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಳಿಕ ಅಗಸನಾಳ ಬಳಿ ಇರುವ ರೈತರು ಬಡವರು, ಇವರ ಜಮೀನು ಸ್ವಾಧೀನಪಡಿಸಿಕೊಳ್ಳುವುದು ಬೇಡ. ಬದಲಾಗಿ ತಡೆಗುಂಡಿ ಬಳಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಗಜಿಣಗಿ ಪತ್ರ ಬರೆದಿದ್ದರಿಂದ ಟೋಲ್ ಪ್ಲಾಜಾ ನಿರ್ಮಾಣ ತಡೆಗುಂಡಿಗೆ ಸ್ಥಳಾಂತರವಾಗಿದೆ. ಈ ಪ್ರಕರಣದಲ್ಲಿ ಜಿಗಜಿಣಗಿ ಅವರ ಸ್ವಹಿತಾಸಕ್ತಿ ಕೆಲಸ ಮಾಡಿದೆ. ಅಲ್ಲದೆ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಈ ಟೋಲ್ ಪ್ಲಾಜಾ ಹಗರಣ ಕುರಿತು ಸಿಬಿಐಗೆ ದಾಖಲೆ ಸಮೇತ ದೂರು ನೀಡಲಾಗಿದೆ. ಪ್ರತ್ಯೇಕ ತನಿಖಾಧಿಕಾರಿ ನೇಮಿಸುವುದಾಗಿ ಸಿಬಿಐ ಭರವಸೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ರಮದಲ್ಲಿ ಭಾಗಿಯಾಗಿರುವ ಜಿಗಜಿಣಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಜಿಗಜಿಣಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸರಕಾರದ ಹಿಡಿತದಲ್ಲಿರುವ ಸಿಬಿಐನಲ್ಲಿ ಸರಿಯಾದ ನ್ಯಾಯ ಸಿಗದಿದ್ದರೆ, ಟೋಲ್ ಪ್ಲಾಜಾಗೆ ಭೂಮಿ ಕಳೆದುಕೊಂಡಿರುವ ರೈತರ ಜೊತೆಗೂಡಿ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಪೃಥ್ವಿರೆಡ್ಡಿ ಎಚ್ಚರಿಸಿದರು.