×
Ad

ಹೆದ್ದಾರಿ ಟೋಲ್ ಸಂಗ್ರಹ ನಿರ್ಧಾರ ಹಿಂಪಡೆಯಲು ಆಗ್ರಹ

Update: 2017-07-14 18:41 IST

ಬೆಂಗಳೂರು, ಜು.14: ರಾಜ್ಯದ 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಸರಕಾರ ಕೈಗೊಂಡಿರುವ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಜು.23 ರ ನಂತರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಬೇಕಾಗುತ್ತದೆ ಎಂದು ರಾಜ್ಯ ಲಾರಿ ಮಾಲಕರ ಮತ್ತು ಏಜೆನ್ಸಿಗಳ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ದೇಶದಲ್ಲಿಯೇ ಅತಿ ಅಧಿಕವಾದ ಟೋಲ್ ಶುಲ್ಕವನ್ನು ವಿಧಿಸಲು ಹೊರಟಿರುವ ಸರಕಾರದ ಕ್ರಮ ಲಾರಿ ಮಾಲಕ ಹಾಗೂ ಏಜೆನ್ಸಿಗಳಿಗೆ ಆಘಾತವನ್ನುಂಟು ಮಾಡಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಸಾಗಾಣಿಕೆ ದರ ಹೆಚ್ಚಳ ಮಾಡಬೇಕಾಗುತ್ತದೆ. ಇದರ ಪರಿಣಾಮ ದಿನ ಬಳಕೆ ವಸ್ತುಗಳ ಮೇಲೆ ಬೀರಲಿದೆ ಎಂದು ಹೇಳಿದರು.

ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಸರಕಾರದಲ್ಲಿ ಸ್ಥಾನಮಾನ ಸಿಗದ ರಾಜಕಾರಣಿಗಳಿಗೆ ನೀಡಲಾಗುತ್ತಿದೆ. ಈಗಾಗಲೇ ವಿವಿಧ ಹಂತಗಳಲ್ಲಿ ಲಕ್ಷಾಂತರ ರೂ.ಗಳ ಟೋಲ್ ಶುಲ್ಕಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅದರ ಜೊತೆಗೆ ಈ 19 ಹೆದ್ದಾರಿಗಳ ಮೂಲಕ 1500 ಕಿ.ಮೀ.ಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಟೋಲ್ ವಿಧಿಸುತ್ತಿರುವುದು ಸರಿಯಲ್ಲ. ಹೀಗಾಗಿ ಕೂಡಲೇ ಸರಕಾರ ತನ್ನ ನಿರ್ಣಯವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯಾದ್ಯಂತ ಪ್ರತಿದಿನ 2 ಲಕ್ಷ ಲಾರಿಗಳು ಸಂಚಾರ ಮಾಡುತ್ತಿವೆ. ಇವುಗಳಿಂದ ಒಂದು ಲಾರಿಗೆ ಒಂದು ದಿನಕ್ಕೆ 10 ಸಾವಿರ ಟೋಲ್ ಶುಲ್ಕ ಕಟ್ಟುತ್ತಿದ್ದು, ಒಟ್ಟಾರೆ ಒಂದು ತಿಂಗಳಿನಲ್ಲಿ ಸರಾಸರಿ ಮೂರು ಲಕ್ಷ ರೂ.ಗಳಷ್ಟು ಟೋಲ್ ಶುಲ್ಕ ಪಾವತಿಸಲಾಗುತ್ತಿದೆ. ಇದರ ನಡುವೆಯೂ ಹೆದ್ದಾರಿಗಳಲ್ಲಿ ಸಾರಿಗೆ ಅಧಿಕಾರಿಗಳು ತಪಾಸಣೆ ನೆಪದಲ್ಲಿ ಲೂಟಿ ಮಾಡುತ್ತಿದ್ದಾರೆ. ಎಲ್ಲ ದಾಖಲೆಗಳೂ ಸರಿ ಇದ್ದರೂ ವಿನಾಕಾರಣ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರತಿ 30 ಕಿ.ಮೀ.ಗೆ ಲಾರಿ ತಡೆದು ತಪಾಸಣೆ ನಡೆಸುತ್ತಾರೆ. ಇದರಿಂದ ನಿಗದಿತ ಸಮಯದಲ್ಲಿ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಏಕರೂಪ ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ನಂತರ ಎಲ್ಲ ರಾಜ್ಯಗಳಲ್ಲಿಯೂ ತಪಾಸಣಾ ಠಾಣೆಗಳನ್ನು ಸಂಪೂರ್ಣವಾಗಿ ರದ್ಧು ಮಾಡಿ ಮುಕ್ತ ಹಾಗೂ ತ್ವರಿತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ರಾಜ್ಯ ಸರಕಾರ ಈ-ಸುಮಗ್ ಅನ್ನು ಜಾರಿ ಮಾಡಿ ಅನಗತ್ಯವಾಗಿ ಲಾರಿಗಳ ಮೇಲೆ ದಾಳಿ ನಡೆಸಿ ಶೋಷಣೆ ಮಾಡುತ್ತಿರುವುದು ಖಂಡನೀಯ. ಇದರ ಜೊತೆಗೆ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ 30 ಕಿ.ಮೀ.ಗೆ ಒಂದರಂತೆ ಆರ್‌ಟಿಒ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿಕೊಂಡು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಹೀಗಾಗಿ ನೆರೆ ರಾಷ್ಟ್ರಗಳಲ್ಲಿ ಅನೇಕ ತಪಾಸಣಾ ಕೇಂದ್ರಗಳನ್ನು ರದ್ಧು ಮಾಡಿರುವ ರೀತಿಯಲ್ಲಿ ರಾಜ್ಯದಲ್ಲಿಯೂ ರದ್ದು ಮಾಡಬೇಕು. 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡುವ ನಿರ್ಣಯ ಕೈಬಿಡಬೇಕು. ಆರ್‌ಟಿಒ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು. ನೈಸ್ ರಸ್ತೆಯಲ್ಲಿ ಹೆಚ್ಚುವರಿಯಾಗಿ ಟೋಲ್ ವಸೂಲಿ ಮಾಡುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News